ಕಾಬೂಲ್‌ನಲ್ಲಿ ಅಮೆರಿಕನ್ ವಿವಿ ಮೇಲೆ ದಾಳಿ; 7 ವಿದ್ಯಾರ್ಥಿಗಳು ಸೇರಿದಂತೆ 12 ಬಲಿ
ಕಾಬೂಲ್, ಆ.25: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ರುವ ಅಮೆರಿಕನ್ ವಿಶ್ವವಿದ್ಯಾನಿಲಯದ ಮೇಲೆ ಉಗ್ರರ ತಂಡವೊಂದು ದಾಳಿ ನಡೆಸಿದ ಪರಿಣಾಮವಾಗಿ ಏಳು ವಿದ್ಯಾರ್ಥಿಗಳು ಸೇರಿದಂತೆ ಹನ್ನೆರಡು ಮಂದಿ ಬಲಿಯಾಗಿದ್ದಾರೆ.ಉಗ್ರರ ದಾಳಿಗೆ ಮೃತಪಟ್ಟವರಲ್ಲಿ ಮೂವರು ಪೊಲೀಸರು ಹಾಗೂ ಇಬ್ಬರು ಭದ್ರತಾ ಸಿಬ್ಬಂದಿಗಳು ಸೇರಿದ್ದಾರೆ
ಬುಧವಾರ ಸಂಜೆ ವಿವಿಗೆ ನುಗ್ಗಿದ ಉಗ್ರರು ಬಾಂಬ್ ಸ್ಫೋಟಿಸಿ, ಬಳಿಕ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿದರು. ಇದರಿಂದಾಗಿ 35ವಿದ್ಯಾಥಿಗಳು ಸೇರಿದಂತೆ 44ಮಂದಿ ಗಾಯಗೊಂಡರು. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದರೂ, ಈ ಪೈಕಿ 12 ಮಂದಿ ಸಾವಿಗೀಡಾದರು.
ಪೊಲೀಸರು ಮತ್ತು ಭದ್ರತಾ ಪಡೆ ಬಳಿಕ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ ಕಾಬೂಲ್‌ನ ಸಿಐಡಿ ಮುಖ್ಯಸ್ಥರಾದ ಎಫ್ .ಒಬೈದಿ ಮಾಹಿತಿ ನೀಡಿದ್ದಾರೆ.
ಅಮೆರಿಕ ಮ್ತು ಆಸ್ಟ್ರೇಲಿಯದ ಇಬ್ಬರು ಪ್ರೋಫೆಸರ್‌ಗಳನ್ನು ವಿವಿ ಬಳಿಯಿಂದ ಅಪಹರಿಸಿದ ಪ್ರಕರಣ ನಡೆದು ಎರಡು ವಾರ ಕಳೆಯುವಷ್ಟರಲ್ಲಿ ವಿವಿಗೆ ಉಗ್ರರು ನುಗ್ಗಿ ಹಲವರನ್ನು ಕೊಂದು ಹಾಕಿದ್ದಾರೆ.
ಅರೆಕಾಲಿಕ ಉದ್ಯೋಗದಲ್ಲಿರುವ ಮಂದಿಗೆ ಶಿಕ್ಷಣ ನೀಡುವ ಉದ್ದೇಶಕ್ಕಾಗಿ 2006ರಲ್ಲಿ ಆರಂಭಗೊಂಡಿದ್ದ ಖಾಸಗಿ ವಿವಿಯಲ್ಲಿ ಕ್ಲಾಸ್ ನಡೆಯುತ್ತಿದ್ದಾಗಲೇ ಉಗ್ರರ ದಾಳಿ ನಡೆದಿದೆ.