ಮಂಗಳೂರಿನಲ್ಲಿ ಶ್ರೀಕೃಷ್ಣ ಜಯಂತಿ ಆಚರಣೆ
ಮಂಗಳೂರು, ಆ.25: ದ.ಕ. ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಇಂದು ನಗರದ ಪುರಭವನದಲ್ಲಿ ಶ್ರೀಕೃಷ್ಣ ಜಯಂತಿ ಆಚರಣೆ ಕಾರ್ಯಕ್ರಮ ನಡೆಯಿತು.
ಕರ್ನಾಟಕ ಸರಕಾರ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕಿ ಶಕುಂತಲಾ ಟಿ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಶ್ರೀಕೃಷ್ಣ ಹೆಣ್ಣುಮಕ್ಕಳ ರಕ್ಷಕ. ಅವನು ಸ್ತ್ರೀಯನ್ನು ಮಾತೃಸ್ವರೂಪವಾಗಿ ನೋಡಿದವನು. ಹೆಣ್ಣು ಎಂದರೆ ಪವಿತ್ರ ಎಂದು ಸಮಾಜಕ್ಕೆ ಸಂದೇಶ ಕೊಟ್ಟವನು. ಆದರೆ ಈಗ ಸ್ತ್ರೀಲೋಲರನ್ನು ಶ್ರೀಕೃಷ್ಣ ಎಂದು ಕರೆಯುತ್ತಿರುವುದು ಮಾತ್ರ ವಿಷಾದಕರ ಎಂದರು.
ಶಾಸಕ ಬಿ.ಎ.ಮೊಯ್ದಿನ್ ಬಾವ ಮಾತನಾಡಿ, ಸರ್ವರನ್ನು ಸಮಾನವಾಗಿ ಕಾಣಬೇಕು ಎಂಬ ಸಂದೇಶ ನೀಡಿದಾತ ಶ್ರೀಕೃಷ್ಣ. ಆತ ನೀಡಿದ ಸಂದೇಶವನ್ನು ನಾವೆಲ್ಲರೂ ಪಾಲಿಸಬೇಕಾಗಿದೆ ಎಂದರು.ಮುಂದಿನ ವರ್ಷದಿಂದ ಶ್ರೀಕೃಷ್ಣಾಷ್ಟಮಿಗೆ ಸಾರ್ವತ್ರಿಕ ಸರಕಾರಿ ರಜೆ ಘೋಷಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.
ದ.ಕ. ಜಿಲ್ಲಾ ಅಪರ ಜಿಲ್ಲಾಧಿಕಾರಿ ಕುಮಾರ್ ಮಾತನಾಡಿ ಶ್ರೀಕೃಷ್ಣನ ಸಂದೇಶಗಳು ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸರಕಾರವು ಮೂರು ವರ್ಷಗಳಿಂದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಆದರೆ ಇಂತಹ ಕಾರ್ಯಕ್ರಮಗಳಲ್ಲಿ ಜಿಲ್ಲೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಕಡಿಮೆ ಎಂದು ಖೇದ ವ್ಯಕ್ತಪಡಿಸಿದರು.
ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ಮಾಜಿ ಅಧ್ಯಕ್ಷ ಕುಂಬ್ಳೆ ಸುಂದರ ರಾವ್ ಕೃಷ್ಣ ಜಯಂತಿಯ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ. ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಕಸಾಪ ದ.ಕ. ಜಿಲ್ಲಾ ಅಧ್ಯಕ್ಷ ಎಸ್.ಪ್ರದೀಪ್‌ಕುಮಾರ್ ಕಲ್ಕೂರ, ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ.ಶ್ರೀವಿದ್ಯಾ, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಮುಹಮ್ಮದ್ ನಝೀರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು.