ಆರ್‌ಎಸ್‌ಎಸ್ ನ ದ್ವೇಷಪೂರಿತ ಅಜೆಂಡಾ ವಿರುದ್ಧ ಹೋರಾಟ ನಿಲ್ಲಿಸಲಾರೆ: ರಾಹುಲ್ ಗಾಂಧಿ
ಹೊಸದಿಲ್ಲಿ, ಆ.25: ಕೇಂದ್ರದ ಆಡಳಿತಾರೂಢ ಬಿಜೆಪಿಯ ಸೈದ್ಧಾಂತಿಕ ಪೋಷಕ ಸಂಘಟನೆಯಾಗಿರುವ ಆರ್‌ಎಸ್‌ಎಸ್ ದ್ವೇಷಪೂರಿತ ಅಜೆಂಡಾ ವಿರುದ್ಧ ಹೋರಾಟ ವನ್ನು ಮುಂದುವರಿಸುವುದಾಗಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ.
ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ. ಹೇಳಿದ ಪ್ರತಿಯೊಂದು ವಿಚಾರಗಳಿಗೂ ಬದ್ಧನಾಗಿರುವೆ ಎಂದು ಟ್ವೀಟ್ ಮಾಡಿದ್ದಾರೆ.ಇದರ ಜೊತೆಗೆ "ಆರ್‌ಎಸ್‌ಎಸ್ ಜೊತೆ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬ ಮಹಾತ್ಮ ಗಾಂಧಿ ಹತ್ಯೆ ಮಾಡಿದ್ದ” ಎಂದು ನೀಡಿದ್ದ ಹೇಳಿಕೆಯ ವೀಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
ಬುಧವಾರ ರಾಹುಲ್ ಗಾಂಧಿ ಮಾನನಷ್ಟ ಮೊಕದ್ದಮೆಯೊಂದರಲ್ಲಿ ತಮ್ಮನ್ನು ಆರೋಪಿಯನ್ನಾಗಿ ಪರಿಗಣಿಸಿರುವುದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಮಹಾತ್ಮ ಗಾಂಧಿ ಹತ್ಯೆಗೆ ಆರ್‌ಎಸ್‌ಎಸ್ ಸಂಘಟನೆ ಹೊಣೆ ಎಂದು ಹೇಳಿರಲಿಲ್ಲ. ತಮ್ಮ ಹೇಳಿಕೆಯನ್ನು ತಿರುಚಲಾಗಿದ್ದು " ಮಹಾತ್ಮ ಗಾಂಧಿ ಹತ್ಯೆಗೆ ಆರ್‌ಎಸ್‌ಎಸ್ ಜೊತೆ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬಹೊಣೆ” ಎಂದು ಹೇಳಿರುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು.
ಭೀವಂಡಿಯಲ್ಲಿ ನಡೆದ ರ‍್ಯಾಲಿಯೊಂದರಲ್ಲಿ ರಾಹುಲ್ ಗಾಂಧಿ ಭಾಷಣದಲ್ಲಿ ಆರ್‌ಎಸ್‌ಎಸ್ ನ ವ್ಯಕ್ತಿಯೊಬ್ಬ ಮಹಾತ್ಮ ಗಾಂಧಿಯ ಹತ್ಯೆ ಮಾಡಿದ್ದಾನೆ. ಇದೀಗ ಅದೇ ಸಂಘಟನೆಯ ವ್ಯಕ್ತಿಗಳು ಮಹಾತ್ಮ ಗಾಂಧಿ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ಹೇಳಿದ್ದರು. ಅವರ ಭಾಷಣದ ವೀಡಿಯೊ ದಾಖಲೆಯನ್ನು ಬಿಡುಗಡೆಗೊಳಿಸಲಾಗಿದೆ.