ಮತ್ತೆ ಸ್ಫೋಟಿಸಿದ ಪ್ರತಿಷ್ಠಿತ ಬ್ರ್ಯಾಂಡ್ ನ ಸ್ಮಾರ್ಟ್ ಫೋನ್ ಭಸ್ಮ
ಚಂಡೀಗಢ, ಆ. 25 : ದುಬಾರಿ ಸ್ಮಾರ್ಟ್ ಫೋನ್ ಗಳು ಹಠಾತ್ತನೆ ಸ್ಫೋಟಿಸುವ ಸರಣಿಗೆ ಈಗ ಚೀನೀ ಸ್ಮಾರ್ಟ್ ಫೋನ್ ಒನ್ ಪ್ಲಸ್ ಸೇರ್ಪಡೆಯಾಗಿದೆ. ಚಂಡೀಗಢದ ದೀಪಕ್ ಗೊಸಾಯಿನ್ ಅವರು ರಾತ್ರಿ ಮಲಗುವ ಮುನ್ನ ಟೇಬಲ್ ಮೇಲಿಟ್ಟಿದ್ದ ಆನ್ ಪ್ಲಸ್ ಒನ್ ಇದ್ದಕ್ಕಿದ್ದಂತೆ ಸ್ಪೋಟಿಸಿ ಸಂಪೂರ್ಣ ಭಸ್ಮವಾಗಿದೆ. " ಟೇಬಲ್ ನಿಂದ ತಾನು ಸಾಕಷ್ಟು ಅಂತರದಲ್ಲಿದ್ದರಿಂದ ಅಪಾಯದಿಂದ ಪಾರಾದೆ. ಆದರೆ ಸಾವಿನ ಅನುಭವ ನನಗಾಗಿದೆ " ಎಂದು ಹೇಳಿರುವ ದೀಪಕ್ " ಈ ವಿಷಯವನ್ನು ಒನ್ ಪ್ಲಸ್ ಕಂಪೆನಿ ಗಂಭೀರವಾಗಿ ತೆಗೆದುಕೊಂಡಿಲ್ಲ " ಎಂದು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಇದನ್ನು ಪ್ರಕಟಿಸಿರುವ ದೀಪಕ್ " ಒನ್ ಪ್ಲಸ್ ನಿಂದ ನನಗೆ ಹಲವರು ಕಾಲ್ ಮಾಡಿದರು. ಆದರೆ ಅವರು ಯಾರೂ ನಿರ್ಧಾರ ತೆಗೆದುಕೊಳ್ಳುವ ಹುದ್ದೆಯಲ್ಲಿ ಇರುವವರಲ್ಲ. ನಾನು ಆರ್ಥಿಕ ಪರಿಹಾರ ಹಾಗು ಬೇರೆ ಬ್ರ್ಯಾಂಡ್ ನ ಹೊಸ ಫೋನ್ ಕೊಡಬೇಕೆಂದು ಕೇಳಿದ್ದೇನೆ " ಎಂದು ಹೇಳಿದ್ದಾರೆ.
ಆದರೆ " ಈಗಾಗಲೇ ಕಂಪೆನಿ ಗ್ರಾಹಕರ ಸಂಪರ್ಕದಲ್ಲಿದ್ದು ಗ್ರಾಹಕರ ಸುರಕ್ಷತೆ ನಮ್ಮ ಆದ್ಯತೆಯಾಗಿದೆ " ಎಂದು ಒನ್ ಪ್ಲಸ್ ಹೇಳಿದೆ. ಈ ಹಿಂದೆಯೂ ಒನ್ ಪ್ಲಸ್ ಫೋನ್ ಸ್ಪೋಟಿಸಿರುವ ಘಟನೆ ನಡೆದಿದೆ.