'ಅವರು ಗೋರಕ್ಷಕರಿಂದಲೇ ಪ್ರಧಾನಿಯಾಗಿದ್ದಾರೆ': ಮೋದಿ ವಿರುದ್ಧ ಕೆಂಡಕಾರಿದ ಸಾಧ್ವಿಪ್ರಾಚಿ !
ಪ್ರತಾಪ್‌ಗಡ,ಆಗಸ್ಟ್ 25: ತನ್ನ ತೀಕ್ಷ್ಣಹೇಳಿಕೆಗಳಿಗೆ ಪ್ರಸಿದ್ಧರಾದ ವಿಹಿಂಪ ನಾಯಕಿ ಸಾಧ್ವಿಪ್ರಾಚಿ ಈ ಸಲ ಪ್ರಧಾನಿ ನರೇಂದ್ರಮೋದಿ ವಿರುದ್ಧವೇ ಟೀಕಾ ಪ್ರಹಾರ ಹರಿಸಿದ್ದಾರೆ ಎಂದು ವರದಿಯಾಗಿದೆ. "ಗೋರಕ್ಷಕರೇ ಮೋದಿಯನ್ನು ದೇಶದ ಪ್ರಧಾನಿ ಮಾಡಿದ್ದಾರೆ. ಕುರ್ಚಿ ಸಿಕ್ಕ ಮೇಲೆ ಗೋರಕ್ಷಕರನ್ನುಅವರು ಮರೆತು ತಪ್ಪಾದ ಹೇಳಿಕೆ ನೀಡುತ್ತಿದ್ದಾರೆ" ಎಂದು ಸಾಧ್ವಿ ಬುಧವಾರ ಇಲ್ಲಿ ನಡೆದ ವಿಶ್ವಹಿಂದೂ ಪರಿಷತ್‌ನ 52ನೆ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದ್ದಾರೆಂದು ವರದಿ ತಿಳಿಸಿದೆ.
ಈ ಸಂದರ್ಭದಲ್ಲಿ ಪ್ರಧಾನಿಮೋದಿಯಿಂದ ಹಿಡಿದು ಮಹಾತ್ಮಾಗಾಂಧಿ, ಕಾಂಗ್ರೆಸ್, ಆಮಿರ್‌ಖಾನ್ ಹಾಗೂ ಉವೈಸಿ, ಫೇರ್‌ಆ್ಯಂಡ್ ಲವ್ಲಿ, ಲವ್‌ಜಿಹಾದ್ ಮತ್ತು ರಾಮಮಂದಿರ ಕುರಿತು ತನ್ನ ವಿಚಾರವನ್ನು ಮಂಡಿಸಿದ್ದು, ಅವರು ಬಳಸಿದ ಭಾಷೆಯಂತೂ ಲಜ್ಜಾಸ್ಪದವಾಗಿತ್ತು ಎನ್ನಲಾಗಿದೆ.
ಗಾಂಧಿಯಿಂದಾಗಿ ಸ್ವಾತಂತ್ರ್ಯ ಸಿಕ್ಕಿಲ್ಲ:
ಮಹಾತ್ಮಾಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ತೀಕ್ಷ್ಣ ದಾಳಿಗಿಳಿದ ಸಾಧ್ವಿ ದೇಶಕ್ಕೆ ಸ್ವಾತಂತ್ರ್ಯ ಕೇವಲ ಚರಕಮತ್ತು ನೂಲಿನಿಂದ ಸಿಕ್ಕಿಲ್ಲ.ದೇಶಕ್ಕೆ ಸ್ವಾತಂತ್ರ್ಯ ಭಗತ್‌ಸಿಂಗ್‌ರಂತಹ ಯೋಧರಿಂದಾಗಿ ಸಿಕ್ಕಿದೆ.ಗಾಂಧಿಯ ಅಹಿಂಸೆ ತತ್ವದಿಂದ ಸ್ವಾತಂತ್ರ್ಯ ಸಿಕ್ಕಿದೆ ಎಂಬುದು ಕೇವಲ ಕಾಂಗ್ರೆಸ್‌ನ ಪ್ರಚಾರ ಮಾತ್ರವಾಗಿದೆ ಎಂದು ಸಾಧ್ವಿಪ್ರಾಚಿ ಹೇಳಿದ್ದಾರೆನ್ನಲಾಗಿದೆ.
ಫೇರ್ ಆ್ಯಂಡ್ ಲವ್ಲಿಯಿಂದ ಬಿಳಿ ಆಗುವುದಿಲ್ಲ:
ಗೋಮಾತೆಯಲ್ಲಿ 33ಕೋಟಿ ದೇವಿ-ದೇವತೆಗಳು ವಾಸ ಮಾಡುತ್ತಾರೆ. ಆದರೆ ಜನರು ಮುದಿ ಗೋವುಗಳನ್ನು ಸಾಕುವ ಬದಲಾಗಿ 500ರೂಪಾಯಿಗೆ ಕಸಾಯಿಗೆ ಮಾರುತ್ತಾರೆ. ಫೇರ್ ಆ್ಯಂಡ್ ಲವ್ಲಿ ಹಚ್ಚುವುದರಿಂದ ಯಾರೂ ಬಿಳಿ ಆಗುವುದಿಲ್ಲ. ಮನೆಯಲ್ಲಿ ಗೋವುಗಳನ್ನುಸಾಕಿರಿ. ಅದರ ಹಾಲು ಮತ್ತು ತುಪ್ಪದಿಂದ ನೀವು ಬಿಳಿ ಆಗುವಿರಿ ಎಂದು ಪ್ರಾಚಿ ಹೇಳಿದ್ದಾರೆ. ಅವರು ವಿಹಿಂಪ ಮತ್ತು ಬಜರಂಗದಳದ ಯುವಕರಿಗೆ ಸುಭಾಶ್ಚಂದ್ರಬೋಸ್, ಭಗತ್‌ಸಿಂಗ್‌ರಂತಹ ಯುವ ದೇಶಭಕ್ತರಿಂದ ಪ್ರೇರಣೆ ಪಡೆಯುವಂತೆ ಕರೆ ನೀಡಿದ್ದಾರೆ. ಜೊತೆಗೆ ಗೋರಕ್ಷೆ ಮಾಡುವ ಕುರಿತು ಸಂಕಲ್ಪತೊಡುವಂತೆ ತಿಳಿಸಿದ್ದಾರೆ.
ಉವೈಸಿಯನ್ನು ಟೀಕಿಸಿದ ಸಾಧ್ವಿ:
ಆಲ್‌ಇಂಡಿಯ ಮಜ್ಲಿಸೆ ಇತ್ತೇಹಾದುಲ್ ಮುಸ್ಲಿಮೀನ್ ಅಧ್ಯಕ್ಷ ಅಸದುದ್ದೀನ್ ಉವೈಸಿಯವರನ್ನು ಟೀಕಿಸಿದ ಸಾಧ್ವಿ ಉವೈಸಿ ದೇವಿ-ದೇವತೆಗಳ ಅಪಹಾಸ್ಯಮಾಡುತ್ತಾರೆ. ಆನಂತರ ತನ್ನ ಕೊರಳಿಗೆ ಚಾಕು ಇಟ್ಟರೂ ಭಾರತ್ ಮಾತಾಕಿ ಜೈ ಎಂದು ಹೇಳುವುದಿಲ್ಲ ಎನ್ನುತ್ತಾರೆ. ಈ ದೇಶದಲ್ಲಿದ್ದೂ ಯಾರು ಭಾರತ್‌ಮಾತಾಕಿ ಜೈ ಹೇಳುವುದಿಲ್ಲವೋ ಅಂತಹವರಿಗೆ ಈ ದೇಶದಲ್ಲಿ ವಾಸಿಸುವ ಹಕ್ಕಿಲ್ಲ ಎಂದು ಸಾಧ್ವಿ ಪ್ರಾಚಿ ಹೇಳಿದ್ದಾರೆಂದು ವರದಿ ತಿಳಿಸಿದೆ.