‘ಮಂಗಳೂರು ನರಕ’ ಎಂದು ಹೇಳೇ ಇಲ್ಲ: ರಮ್ಯಾ
ಮಂಗಳೂರು, ಆ. 25: ‘ಮಂಗಳೂರು ನರಕ’ ಎಂದು ನಾನು ಎಲ್ಲೂ ಹೇಳಿಕೆ ನೀಡಿಲ್ಲ ಎಂದು ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಸ್ಪಷ್ಟಪಡಿಸಿದ್ದಾರೆ.
ನಗರದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮಂಗಳೂರು ನಾನು ಹಿಂದಿನಿಂದಲೂ ಪ್ರೀತಿಸುತ್ತೇನೆ. ಇಲ್ಲಿನ ಜನರು ಬುದ್ಧಿವಂತರು, ಉತ್ತಮ ಬಾಂಧವ್ಯ ಹೊಂದಿದವರು. ಮಂಗಳೂರಿನಿಂದಲೇ ನಾನು ಪ್ರಚಾರವನ್ನು ಪಡೆದಿರುವ ಕ್ಷೇತ್ರ ಎಂದರು.
ಖಾಸಗಿ ಟಿವಿ ಚಾನಲ್‌ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಪಾಕಿಸ್ತಾನದಲ್ಲಿ ನಡೆಯುತ್ತಿರುವ ದುಷ್ಕೃತ್ಯಗಳ ಬಗ್ಗೆ ಕೇಳಿದಾಗ ‘‘ಇಂತಹ ಘಟನೆಗಳು ದೇಶದ ಹಲವು ಕಡೆಗಳಲ್ಲಿ ನಡೆದಿವೆ. ಗುಜರಾತ್, ಕಾಶ್ಮೀರ ಅಥವಾ ಮಂಗಳೂರಿನಲ್ಲೂ ಗೋ ರಕ್ಷಣೆಯ ನೆಪದಲ್ಲಿ ಹಲ್ಲೆಗಳು, ಕೊಲೆಗಳು ನಡೆದಿವೆ. ಇತ್ತೀಚೆಗೆ ಗೋ ರಕ್ಷಣೆ ವಿಷಯದಲ್ಲಿ ಸಂಘಪರಿವಾರದವರು ಬಿಜೆಪಿ ಮುಖಂಡರೊಬ್ಬರನ್ನು ಕೊಲೆ ಮಾಡಿರುವುದನ್ನು ಉಲ್ಲೇಖಿಸಿದ್ದೇನೆಯೇ ಹೊರತು ‘ಮಂಗಳೂರು ನರಕ’ ಅಂತ ಹೇಳಿಲ್ಲ. ದೃಶ್ಯ ಮಾಧ್ಯಮವೊಂದು ನನ್ನ ಹೇಳಿಕೆಯನ್ನು ತಿರುಚಿ ಈ ರೀತಿಯ ಅಪಪ್ರಚಾರ ನಡೆಸಿದೆ ಎಂದು ರಮ್ಯಾ ಪ್ರತಿಕ್ರಿಯಿಸಿದರು.
ಮಾಧ್ಯಮದವರು ಮತ್ತೆ ಮತ್ತೆ ನೀವು ‘ಮಂಗಳೂರು ನರಕ’ ಎಂದು ಹೇಳಿಕೆ ನೀಡಿದ್ದೀರಿ ಎಂದಾಗ ‘ನಾನು ಸಂದರ್ಶನದಲ್ಲಿ ನೀಡಿದ್ದ ಹೇಳಿಕೆಯನ್ನು ಸರಿಯಾಗಿ ಕೇಳಿಸಿಕೊಳ್ಳಿ. ಅವರು ಯಾವ ರೀತಿಯಲ್ಲಿ ಪ್ರಶ್ನೆ ಕೇಳಿದ್ದಾರೋ ಅದಕ್ಕೆ ಸರಿಯಾಗಿಯೇ ಉತ್ತರಿಸಿದ್ದೇನೆ ಎಂದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ತಮ್ಮ ವಿರುದ್ಧ ನಡೆದ ಪ್ರತಿಭಟನೆ, ಮೊಟ್ಟೆ ಎಸೆತದ ಬಗ್ಗೆ ಪ್ರತಿಕ್ರಿಯಿಸಿದ ರಮ್ಯಾ, ಈ ಘಟನೆಯಿಂದ ನನ್ನ ಮನಸ್ಸಿಗೆ ನೋವಾಗಿಲ್ಲ. ನಾನು ಆಕ್ರೋಶಗೊಂಡಿಲ್ಲ. ಅವರ ಕೃತ್ಯಕ್ಕೆ ಹತ್ತಿರದಲ್ಲಿದ್ದವರೇ ಕೆಲವರು ನಗುತ್ತಿದ್ದರು ಎಂದರು.