ವಿವಿಐಪಿ ಹೆಲಿಕಾಪ್ಟರ್ ಖರೀದಿ ಒಪ್ಪಂದದ ದಾಖಲೆಗಳು ನಮ್ಮ ಬಳಿಯಿಲ್ಲ: ರಕ್ಷಣಾ ಸಚಿವಾಲಯ; ಐಎಎಫ್
ಹೊಸದಿಲ್ಲಿ, ಆ.25: ಆಗಸ್ಟಾ ವೆಸ್ಟ್‌ಲ್ಯಾಂಡ್‌ನೊಂದಿಗಿನ ವಿವಾದಿತ ವಿವಿಐಪಿ ಹೆಲಿಕಾಫ್ಟರ್ ಖರೀದಿಗೆ ಸಂಬಂಧಿಸಿದ ದಾಖಲೆಗಳು ತನ್ನ ಬಳಿಯಿಲ್ಲವೆಂದು ಭಾರತೀಯ ವಾಯು ಸೇನೆ(ಐಎಎಫ್) ಪ್ರತಿಪಾದಿಸಿದೆ.
ಆರ್‌ಟಿಐ ಅರ್ಜಿಯೊಂದರ ಮೂಲಕ ಕೋರಲಾಗಿರುವ ಮಾಹಿತಿಯ ಪ್ರಾಥಮಿಕ ವಾರಿಸುದಾರರು ಐಎಫ್ ಹಾಗೂ ರಕ್ಷಣಾ ಸಚಿವಾಲಯಗಳಾಗಿವೆ. ರೂ.3,600 ಕೋಟಿಗಳ ವ್ಯವಹಾರದಲ್ಲಿ ಲಂಚ ಪಾವತಿಸಿರುವ ಆರೋಪ ಬಂದ ಮೇಲೆ ಒಪ್ಪಂದವನ್ನು ರದ್ದುಗೊಳಿಸಲಾಗಿತ್ತು. ಆದರೆ, ಸಚಿವಲಯವು ಅವ್ಯವಹಾರದ ಕುರಿತು ತನಿಖೆಗೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದೆ.
ಬೆಲೆ ಚೌಕಾಶಿ ಹಾಗೂ ಕಡತ ಟಿಪ್ಪಣಿ ಸೇರಿದಂತೆ ಒಪ್ಪಂದಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ಕೋರಿ ಆರ್‌ಟಿಐ ಕಾಯ್ದೆಯನ್ವಯ ರಕ್ಷಣಾ ಸಚಿವಾಲಯಕ್ಕೆ ಅರ್ಜಿಯೊಂದು ಬಂದಿತ್ತು.
ಇದಲ್ಲದೆ, ಬೆಲೆ ಚೌಕಾಸಿ ಸಮಿತಿಯ ಸಭೆಗಳು, ಒಪ್ಪಂದ ರದ್ದತಿ, ಆಗಸ್ಟಾ ವೆಸ್ಟ್‌ಲ್ಯಾಂಡ್ ನೀಡಿದ್ದ ಮೊದಲ ಅಂದಾಜು, ಬೆಲೆ ಹೆಚ್ಚಳಕ್ಕೆ ಕಾರಣವಾದ, ಹೆಚ್ಚುವರಿ ವ್ಯವಸ್ಥೆ, ಹಾರಾಟದ ಎತ್ತರ ಹಾಗೂ ಕ್ಯಾಬಿನ್ ಎತ್ತರ ತಗ್ಗಿಸಿದ ಚರ್ಚೆಗಳಿಗೆ ಸಂಬಂಧಿಸಿದ ಮಾಹಿತಿಯನ್ನೂ ಅರ್ಜಿದಾರರು ಕೇಳಿದ್ದರು.
ರಕ್ಷಣಾ ಸಚಿವಾಲಯವು ಮಾಹಿತಿ ಒದಗಿಸುವಂತೆ ಸೂಚಿಸಿ ಅರ್ಜಿಯನ್ನು ಜೂ.16ರಂದು ಐಎಎಫ್‌ಗೆ ಕಳುಹಿಸಿತ್ತು.
ಅದಕ್ಕೆ, ಅರ್ಜಿದಾರರು ಕೋರಿರುವ ಮಾಹಿತಿ ತಮ್ಮ ಮುಖ್ಯಾಲಯದಲ್ಲಿ ಲಭ್ಯವಿಲ್ಲವೆಂದು ಐಎಎಫ್ ಮುಖ್ಯಾಲಯ ಉತ್ತರಿಸಿತ್ತು. ಆಶ್ಚರ್ಯವೆಂದರೆ, ಮೇ 6ರಂದು ಲೋಕಸಭೆಯಲ್ಲಿ ಈ ವಿಷಯದ ಚರ್ಚೆಯ ವೇಳೆ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಒಪ್ಪಂದದ ಹಲವು ವಿವರಗಳನ್ನು ಉಲ್ಲೇಖಿಸಿದ್ದರು.
ಅಲ್ಲದೆ, ತನಿಖೆಯ ವೇಳೆ ಸಿಬಿಐ ಸಹ ಹಲವು ಮಾಹಿತಿಗಳನ್ನು ಸಂಗ್ರಹಿಸಿದೆ. ನಿಯಮದಂತೆ ಅವುಗಳನ್ನು ಸಂಗ್ರಹಿಸಲಾದ ಸಚಿವಾಲಯ ಅಥವಾ ಇಲಾಖೆಯಲ್ಲಿ ದಾಖಲೆಯಗಳ ಪ್ರತಿಗಳನ್ನು ಬಿಡಲೇ ಬೇಕಾಗುತ್ತದೆ.