ದೇಶಾದ್ಯಂತದ ಕಾಶ್ಮೀರ ಯುವಕರಿಗಾಗಿ ನೋಡಲ್ ಏಜೆನ್ಸಿ: ರಾಜನಾಥ್
ಹೊಸದಿಲ್ಲಿ, ಅ.25: ದೇಶಾದ್ಯಂತವಿರುವ ಕಾಶ್ಮೀರಿ ಯುವಕರ ದೂರುಗಳ ಪರಿಶೀಲನೆಗಾಗಿ ಕೇಂದ್ರ ಗೃಹ ಸಚಿವಾಲಯವು ಶೀಘ್ರವೇ ನೋಡಲ್ ಏಜೆನ್ಸಿಯೊಂದನ್ನು ರಚಿಸಲಿದೆಯೆಂದು ಎರಡು ದಿನಗಳ ಕಾಶ್ಮೀರ ಭೇಟಿಗಾಗಿ ಆಗಮಿಸಿರುವ ಗೃಹ ಸಚಿವ ರಾಜನಾಥ್ ಸಿಂಗ್ ಶ್ರೀನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದ್ದಾರೆ.
ಕಾಶ್ಮೀರಿ ಯುವಕರು ಏಜೆನ್ಸಿಯ ಅಧಿಕಾರಿಗಳನ್ನು ದೂರವಾಣಿಯಲ್ಲಿ ಸಂಪರ್ಕಿಸಬಹುದು. ಅದನ್ನು ಶೀಘ್ರವೇ ಪ್ರಕಟಿಸಲಿದ್ದೇವೆಂದು ಅವರು ಹೇಳಿದರು.
ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಇಬ್ಬರೂ ನಾಯಕರು ಗುರುವಾರ ಮೊದಲು ಸಭೆಯೊಂದನ್ನು ನಡೆಸಿದ್ದರು.
ರಾಜ್ಯದ ಶೇ.95 ಮಂದಿ ಹಿಂಸಾಚಾರವನ್ನು ಬಯಸುತ್ತಿಲ್ಲ. ಅವರಿಗೆ ಶಾಂತಿ ಬೇಕಾಗಿದೆ. ತಾವು ಅವರನ್ನು ತಲುಪಬೇಕೆಂದು ಮೆಹಬೂಬಾ ಹೇಳಿದರು.
ಇದೇ ಭಾವನೆಯನ್ನು ಪ್ರಕಟಿಸಿದ ರಾಜನಾಥ್, ಕಾಶ್ಮೀರದ ಭವಿಷ್ಯದ ಹೊರತಾಗಿ ಭಾರತದ ಭವಿಷ್ಯವಿರದು ಎಂದರು.
ತನ್ನ 2 ದಿನಗಳ ಭೇಟಿಯ ವೇಳೆ ರಾಜನಾಥ್ ರಾಜ್ಯದ ಹಲವು ನಾಯಕರನ್ನು ಭೇಟಿಯಾದರು. ಕಣಿವೆಯಲ್ಲಿ ಶಾಂತಿ ಮರುಕಳಿಸಲು ಬೇಕಾದ ಎಲ್ಲವನ್ನು ಸರಕಾರ ಮಾಡಲಿದೆಯೆಂಬ ಆಶಾವಾದವನ್ನು ಅವರೆಲ್ಲರೂ ವ್ಯಕ್ತಪಡಿಸಿದರು.
ಹಲವು ಪ್ರಕರಣಗಳಲ್ಲಿ ಸರಿಪಡಿಸಲಾಗದ ತೀವ್ರ ಗಾಯಗಳನ್ನು ಮಾಡಿರುವ ಪೆಲೆಟ್‌ಗನ್‌ಗಳ ಉಪಯೋಗವನ್ನು ನಿಲ್ಲಿಸುವಂತೆ ರಾಜ್ಯದ ವಿಪಕ್ಷ ನಾಯಕರು ಆಗ್ರಹಿಸಿದರು.
ಜಮ್ಮು-ಕಾಶ್ಮೀರದ ಹಲವು ಭಾಗಗಳಲ್ಲಿ ಕರ್ಫ್ಯೂ 48ನೆ ದಿನವನ್ನು ಪೂರೈಸಿದೆ. ಸುಮಾರು 70 ಮಂದಿ ಪ್ರತಿಭಟನಕಾರರು ಹಾಗೂ ಭದ್ರತಾ ಪಡೆಗಳ ನಡುವಣ ಘರ್ಷಣೆಯಲ್ಲಿ ಸಾವಿಗೀಡಾಗಿದ್ದಾರೆ.