ಫಿಲೋಮಿನಾ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ
ಪುತ್ತೂರು,ಆ.25: ಶಿಕ್ಷಣವೆಂದರೆ ಒಬ್ಬ ವ್ಯಕ್ತಿ ತಾನು ಆಯ್ಕೆ ಮಾಡಿದ ವಿಷಯದ ಮೇಲೆ ನಿರಂತರ ಅಧ್ಯಯನವನ್ನು ನಡೆಸಿ, ತನ್ನ ಮುಂದಿನ ಬದುಕನ್ನು ಸಮರ್ಪಕವಾಗಿ ಎದುರಿಸಲು ಅಗತ್ಯವಿರುವ ಸಾಮರ್ಥ್ಯವನ್ನು ಪಡೆಯುವ ಒಂದು ಪ್ರಕ್ರಿಯೆ ಎಂದು ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿರುವ ರೆ ಡಾ ಆ್ಯಂಟನಿ ಪ್ರಕಾಶ್ ಮೊಂತೆರೊ ಹೇಳಿದರು.
ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಓರಿಯೆಂಟೇಶನ್ ಕಾರ್ಯಕ್ರಮದಲ್ಲಿ ಮಾತನಾಡಿ, ಇತೀಚಿನ ವರ್ಷಗಳಲ್ಲಿ ಸ್ನಾತಕೋತ್ತರ ಅಧ್ಯಯನಗೈಯುವ ವಿದ್ಯಾರ್ಥಿಗಳ ಸಂಖ್ಯೆ ಏರುತ್ತಿದೆ. ವಿದ್ಯಾರ್ಥಿಗಳು ತಾವು ಪ್ರವೇಶ ಪಡೆದ ಕೋರ್ಸುಗಳಲ್ಲಿ ಅಭೂತಪೂರ್ವ ಸಾಧನೆ ಮಾಡುವಲ್ಲಿ ದೃಢಸಂಕಲ್ಪವನ್ನು ಹೊಂದಿರಬೇಕು. ವಿದ್ಯಾಭ್ಯಾಸದ ಜೊತೆಯಲ್ಲಿ ಉತ್ತಮ ಗುಣ ನಡತೆ, ಅಧ್ಯಯನಶೀಲತೆ, ಸಾಮಾಜಿಕ ಪ್ರಜ್ಞೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಅಧ್ಯಯನ ಕೇಂದ್ರದಲ್ಲಿ ಒದಗಿಸಲಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೊ ನೊರೊನ್ಹ ಮಾತನಾಡಿ, ಸ್ನಾತಕೋತ್ತರ ಅಧ್ಯಯನಗೈಯವ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದುಕೊಂಡು, ಸಂಶೋಧನಾ ಚಟುವಟಿಕೆಗಳ ಬಗ್ಗೆಯೂ ಆಸಕ್ತಿ ಹೊಂದಿರಬೇಕು. ವಿದ್ಯಾರ್ಥಿ ದೆಸೆಯಲ್ಲಿ ಉತ್ತಮ ಗುರಿಯನ್ನಿಟ್ಟುಕೊಂಡಿರಬೇಕು. ತಾವು ಗಳಿಸುವ ವಿದ್ಯೆ ಮತ್ತು ಅನುಭವ ತಮ್ಮ ಮುಂದಿನ ಜೀವನಕ್ಕೆ ದಾರಿದೀಪವಾಗಬೇಕು ಎಂದು ಹೇಳಿದರು.
ಸ್ಪೂರ್ತಿ ಮತ್ತು ತಂಡದವರು ಪ್ರಾರ್ಥಿಸಿದರು. ಸಮಾಜ ಕಾರ್ಯ ಪ್ರಾಧ್ಯಾಪಿಕೆ ಪ್ರತಿಭಾ ಸ್ವಾಗತಿಸಿದರು. ಅರ್ಥಶಾಸ್ತ್ರ ಪ್ರಾಧ್ಯಾಪಿಕೆ ಸಂಧ್ಯಾ ಎಚ್ ವಂದಿಸಿದರು. ವಾಣಿಜ್ಯಶಾಸ್ತ್ರ ಪ್ರಾಧ್ಯಾಪಿಕೆ ಪ್ರಿಯಾಂಕ ಅಡ್‌ಲಿನ್ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು.