×
Ad

ಮರಳುಗಾರಿಕೆ: ತಡೆಯಾಜ್ಞೆ ತೆರವುಗೊಳಿಸಲು ಜಿಲ್ಲಾಡಳಿತಕ್ಕೆ ಲಾರಿ-ಟೆಂಪೊ ಮಾಲಕರ ಒತ್ತಾಯ

Update: 2016-08-25 23:55 IST

ಉಡುಪಿ, ಆ.25: ಚೆನ್ನೈಯಲ್ಲಿರುವ ಹಸಿರು ಪೀಠದ ತಡೆಯಾಜ್ಞೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ಸ್ಥಗಿತಗೊಂಡಿದ್ದು, ಇದರಿಂದ ಜಿಲ್ಲೆಯ ಜನರು ಸೇರಿದಂತೆ ಬಹಳಷ್ಟು ಮಂದಿಗೆ ತೊಂದರೆಯಾಗುತ್ತಿದೆ. ಆದುದರಿಂದ ಜಿಲ್ಲಾಡಳಿತ ಆಸಕ್ತಿ ವಹಿಸಿ ತಡೆಯಾಜ್ಞೆಯನ್ನು ತೆರವುಗೊಳಿಸಲು ಮುಂದಾಗಬೇಕು ಎಂದು ಉಡುಪಿ ಜಿಲ್ಲಾ ಕಟ್ಟಡ ಸಾಮಗ್ರಿ ಸಾಗಾಟ, ಲಾರಿ-ಟೆಂಪೊ ಮಾಲಕರ ಸಂಘ ಕಟಪಾಡಿ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಜಿ.ನಾಗೇಂದ್ರ, 2016ರ ಮೇ ಕೊನೆಯ ವಾರದಿಂದ ಉಡುಪಿ ಜಿಲ್ಲೆಯಲ್ಲಿ ಮರಳು ತೆಗೆಯಲು ಪೀಠದಿಂದ ತಡೆಯಾಜ್ಞೆ ಇದೆ. ಅದನ್ನೀಗ ಮತ್ತೆ ಸೆ.14ರವರೆಗೆ ಮುಂದುವರಿಸಲಾಗಿದೆ. ಇದರಿಂದ ಲಾರಿ-ಟೆಂಪೊ ಮಾಲಕರು, ಚಾಲಕರು ತೀವ್ರ ತೊಂದರೆಗೊಳಗಾಗಿದ್ದಾರೆ. ಮರಳುಗಾರಿಕೆಯನ್ನೇ ನಂಬಿರುವ ನೂರಾರು ಮಂದಿಯ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಆದುದರಿಂದ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ತಡೆಯಾಜ್ಞೆ ತಂದಿರುವವರ ಮನವೊಲಿಸಿ ಅದನ್ನು ತೆರವುಗೊಳಿಸಲು ಮುಂದಾಗಬೇಕು ಎಂದವರು ಹೇಳಿದರು.
ಪ್ರತಿ ತಿಂಗಳು 100 ಕಟ್ಟಡ ಸಾಮಗ್ರಿ ಸಾಗಾಟ ಲಾರಿ-ಟೆಂಪೊಗಳಿಗೆ ದಂಡ ಹಾಕುವಂತೆ ಸಚಿವ ವಿನಯ್ ಕುಲಕರ್ಣಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಈ ರೀತಿ ದಂಡ ವಿಧಿಸುವುದಾದರೆ ಪರವಾನಿಗೆ ನೀಡಿರುವುದು ಯಾಕೆ ಎಂದು ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಮರಳುಗಾರಿಕೆ ಪುನರಾರಂಭದ ಕುರಿತಂತೆ 15 ದಿನಗಳೊಳಗೆ ಸಭೆ ಕರೆದು ಚರ್ಚಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟಕ್ಕಿಳಿಯಲು ನಿರ್ಧರಿಸಿದ್ದೇವೆ ಎಂದವರು 
ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ರಾಜೇಶ್ ನಾಯಕ್, ಗೋಪಾಲಕೃಷ್ಣ, ರಾಘವೇಂದ್ರ ಶೆಟ್ಟಿ, ಪುಂಡರೀಕಾಕ್ಷ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News