ರೊನಾಲ್ಡೊಗೆ ಯುಇಎಫ್‌ಎ ಶ್ರೇಷ್ಠ ಆಟಗಾರ ಪ್ರಶಸ್ತಿ
ಮ್ಯಾಡ್ರಿಡ್,ಆ.26: ಪೋರ್ಚುಗಲ್ ಹಾಗೂ ರಿಯಲ್ ಮ್ಯಾಡ್ರಿಡ್‌ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಯುರೋಪ್‌ನ ಯುಇಎಫ್‌ಎ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ರೊನಾಲ್ಡೊ ಎರಡನೆ ಬಾರಿ ಈ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಯುಇಎಫ್‌ಎ ಪ್ರಶಸ್ತಿಯ ಸ್ಪರ್ಧೆಯಲ್ಲಿ ರಿಯಲ್ ಮ್ಯಾಡ್ರಿಡ್ ಕ್ಲಬ್‌ನ ಸಹ ಆಟಗಾರರಾದ ಗರೆತ್ ಬೇಲ್ ಹಾಗೂ ಫ್ರಾನ್ಸ್‌ನ ಸ್ಟಾರ್ ಆಟಗಾರ ಆ್ಯಂಟೊನಿ ಗ್ರಿಝ್ಮನ್‌ರನ್ನು ಹಿಂದಿಕ್ಕಿ ಪ್ರಶಸ್ತಿ ಬಾಚಿಕೊಂಡರು. ಈ ಮೂಲಕ ಫಿಫಾದ ವಿಶ್ವ ಆಟಗಾರ ಪ್ರಶಸ್ತಿಯನ್ನು ನಾಲ್ಕನೆ ಬಾರಿ ಗೆದ್ದುಕೊಳ್ಳುವ ಫೇವರಿಟ್ ಆಟಗಾರನಾಗಿ ರೊನಾಲ್ಡೊ ಹೊರಹೊಮ್ಮಿದ್ದಾರೆ.
ಯುಇಎಫ್‌ಎನ 55 ಸದಸ್ಯ ರಾಷ್ಟ್ರಗಳ ಪತ್ರಕರ್ತರು ಪ್ರಶಸ್ತಿ ಆಯ್ಕೆಗೆ ಮತದಾನ ಮಾಡಿದ್ದು, ಗುರುವಾರ ನಡೆದ ಚಾಂಪಿಯನ್ಸ್ ಲೀಗ್ ಡ್ರಾ ಪ್ರಕ್ರಿಯೆ ವೇಳೆ ಪ್ರಶಸ್ತಿ ವಿಜೇತರ ಹೆಸರನ್ನು ಪ್ರಕಟಿಸಲಾಯಿತು.
ರೊನಾಲ್ಡೊ 2014ರಲ್ಲಿ ಈ ಪ್ರಶಸ್ತಿಯನ್ನು ಪಡೆದಿದ್ದರು. ಈ ಮೂಲಕ ಲಿಯೊನೆಲ್ ಮೆಸ್ಸಿ(2 ಬಾರಿ) ಸಾಧನೆಯನ್ನು ಸರಿಗಟ್ಟಿದರು, ಆ್ಯಂಡ್ರೆಸ್ ಇನಿಯೆಸ್ಟಾ ಹಾಗೂ ಫ್ರಾಂಕ್ ರಿಬೆರಿ ಕೂಡ ಈ ಹಿಂದೆ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದರು. 2011ರಲ್ಲಿ ಯುಇಎಫ್‌ಎ ಪ್ರಶಸ್ತಿ ನೀಡಲು ಆರಂಭಿಸಲಾಗಿತ್ತು.
ಕಳೆದ ಋತುವಿನಲ್ಲಿ ಯುರೋಪಿಯನ್ ಚಾಂಪಿಯನ್‌ಶಿಪ್ ಹಾಗೂ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಜಯಿಸಲು ರಿಯಲ್ ಮ್ಯಾಡ್ರಿಡ್ ಹಾಗೂ ಪೋರ್ಚುಗಲ್ ತಂಡಕ್ಕೆ ರೊನಾಲ್ಡೊ ನೆರವಾಗಿದ್ದರು.
31ರ ಪ್ರಾಯದ ರೊನಾಲ್ಡೊ ಅಟ್ಲೆಟಿಕೊ ವಿರುದ್ಧದ ಚಾಂಪಿಯನ್ಸ್ ಲೀಗ್ ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಗೋಲು ಬಾರಿಸಿ ರಿಯಲ್ ಮ್ಯಾಡ್ರಿಡ್ 11ನೆ ಬಾರಿ ಪ್ರಶಸ್ತಿ ಜಯಿಸಲು ನೆರವಾಗಿದ್ದರು. ಜುಲೈನಲ್ಲಿ ನಡೆದ ಯುರೋ 2016ರಲ್ಲಿ ಪೋರ್ಚುಗಲ್ ತಂಡ ರೊನಾಲ್ಡೊ ನಾಯಕತ್ವದಲ್ಲಿ ಪ್ರಶಸ್ತಿ ಗೆದ್ದುಕೊಂಡಿತ್ತು.
ಫಿಫಾ ವಿಶ್ವ ಆಟಗಾರ ಪ್ರಶಸ್ತಿಯನ್ನು ಬ್ಯಾಲನ್ ಡಿ’ಒರ್ ಎಂದು ಮರು ನಾಮಕರಣ ಮಾಡಿದಂತೆಯೇ ಯುರೋಪಿಯನ್ ವರ್ಷದ ಫುಟ್ಬಾಲ್ ಗೌರವವನ್ನು ಯುಇಎಫ್‌ಎ ಪ್ರಶಸ್ತಿ ಎಂದು ಬದಲಿಸಲಾಗಿತ್ತು.