×
Ad

ಈಗ ಜೈಶಾಗೂ ಕಾಡುತ್ತಿದೆ ಎಚ್1ಎನ್1 ಜ್ವರ

Update: 2016-08-26 12:19 IST

ಬೆಂಗಳೂರು, ಆ.26: ಕಳೆದ ವಾರ ಬ್ರೆಝಿಲ್‌ನ ರಿಯೋದಿಂದ ಸ್ವದೇಶಕ್ಕೆ ವಾಪಸಾದ ಬಳಿಕ ತಕ್ಷಣವೇ ಸಾಯ್ ಕ್ಯಾಂಪಸ್‌ನ್ನು ತೊರೆದಿದ್ದ ಮ್ಯಾರಥಾನ್ ಓಟಗಾರ್ತಿ ಒ.ಪಿ. ಜೈಶಾ ಎಚ್1ಎನ್1ವೈರಸ್‌ನಿಂದ ಬಳಲುತ್ತಿದ್ದಾರೆ ಎಂದು ಭಾರತದ ಕ್ರೀಡಾ ಪ್ರಾಧಿಕಾರ(ಸಾಯ್) ಗುರುವಾರ ತಿಳಿಸಿದೆ.

ರಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳಾ ಮ್ಯಾರಥಾನ್‌ನ ವೇಳೆ ಬಾಯಾರಿಕೆಯಾಗಿ ನಿತ್ರಾಣಗೊಂಡಿದ್ದ ಜೈಶಾ ಬೆಂಗಳೂರಿಗೆ ಆಗಮಿಸಿದ ನಾಲ್ಕು ದಿನಗಳ ಬಳಿಕ ಬುಧವಾರ ತನ್ನ ರಕ್ತ ಮಾದರಿಯನ್ನು ನೀಡಿದ್ದರು. ರಕ್ತ ಪರೀಕ್ಷೆಯಲ್ಲಿ ಜೈಶಾಗೂ ಎಚ್1ಎನ್1 ಜ್ವರ ಇರುವುದು ದೃಢಪಟ್ಟಿದೆ. 3,000 ಮೀ. ಸ್ಟೀಪಲ್ ಚೇಸ್ ಓಟಗಾರ್ತಿ ಸುಧಾ ಸಿಂಗ್‌ಗೂ ಎಚ್1ಎನ್1 ಜ್ವರ ಬಾಧಿಸಿದ್ದ ಕಾರಣ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

 ‘‘ಜೈಶಾಗೆ ಎಚ್1ಎನ್1 ಜ್ವರ ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಡಾ. ಸುನಂದಾರ ಶಿಫಾರಸಿನ ಮೇರೆಗೆ ಅವರನ್ನು ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ನಿಮ್ಹಾನ್ಸ್ ಆಸ್ಪತ್ರೆಯಿಂದ ಜೈಶಾರ ವರದಿ ಬಂದಿದೆ. ಅವರಿಗೆ ಈಗಾಗಲೇ ಆ್ಯಂಟಿವೈರಸ್ ಡ್ರಗ್ಸ್ ನೀಡಲಾಗಿದೆ. ಜೈಶಾ ಗುಣಮುಖವಾಗುವ ತನಕ ನಾವು ಎಲ್ಲ ರೀತಿಯ ನೆರವು ನೀಡಲಿದ್ದೇವೆ’’ ಎಂದು ಕರ್ನಾಟಕ ಆರೋಗ್ಯನಿಗಾ ಅಧಿಕಾರಿ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.

 ರಿಯೋದಿಂದ ವಾಪಸಾದ ಬಳಿಕ ತವರು ರಾಜ್ಯ ಕೇರಳಕ್ಕೆ ತೆರಳಿ ಆಯುರ್ವೇದ ಚಿಕಿತ್ಸೆ ಪಡೆಯುವ ಉದ್ದೇಶದಿಂದ ಸಾಯ್ ಕ್ಯಾಂಪಸ್‌ನಿಂದ ಜೈಶಾ ತೆರಳಿದ್ದರು. ಕೇರಳಕ್ಕೆ ತೆರಳದ ಅವರು ಕ್ಯಾಂಪಸ್‌ಗೆ ಹತ್ತಿರವಿರುವ ಸ್ನೇಹಿತೆಯ ಮನೆಯಲ್ಲಿದ್ದರು ಎನ್ನಲಾಗಿದೆ.

ಬುಧವಾರ ರಾಜ್ಯದ ಆರೋಗ್ಯ ವಿಭಾಗದ ವೈದ್ಯರು ಹಾಗೂ ಸಾಯ್ ಅಧಿಕಾರಿಗಳು ಮನವರಿಕೆ ಮಾಡಿದ ಬಳಿಕ ಜೈಶಾ ತನ್ನ ರಕ್ತದ ಮಾದರಿಯನ್ನು ನೀಡಿದ್ದರು. ಜೈಶಾ ನಗರಕ್ಕೆ ಬಂದ ಬಳಿಕ ಜ್ವರ ಹಾಗೂ ಕಫದಿಂದ ಬಳಲುತ್ತಿದ್ದರು. ನಿತ್ರಾಣದಿಂದ ಸಂಪೂರ್ಣ ಚೇತರಿಸಿಕೊಂಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News