ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ: ಸಿಐಡಿ ತನಿಖೆ ಶೀಘ್ರ ಪೂರ್ಣ; ಗೃಹಸಚಿವ ಪರಮೇಶ್ವರ್
ಉಡುಪಿ, ಆ.26: ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ ತನಿಖೆಯನ್ನು ಸಿಐಡಿ ಶೀಘ್ರ ಪೂರ್ಣಗೊಳಿಸಲಿದೆ ಎಂದು ರಾಜ್ಯ ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ತಪ್ಪಾಗಿರುವುದೆಂಬ ಕಾರಣಕ್ಕೆ ಇದರ ತನಿಖೆಯ ಹೊಣೆಯನ್ನು ಸಿಐಡಿಗೆ ಒಪ್ಪಿಸಿದ್ದೇವೆ. ಅಂತಿಮವಾಗಿ ಸತ್ಯ ಹೊರಬರಬೇಕು ಎಂಬುದು ಈ ತನಿಖೆಯ ಉದ್ದೇಶವಾಗಿದೆ. ತನಿಖೆಯ ವರದಿ ಸಲ್ಲಿಸಲು ಸಿಐಡಿಗೆ ಸಮಯ ನಿಗದಿಪಡಿಸಲು ಆಗುವುದಿಲ್ಲ. ಆದರೆ ಆದಷ್ಟು ಶೀಘ್ರದಲ್ಲಿ ತನಿಖೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದವರು ತಿಳಿಸಿದರು.
ಮಂಗಳೂರು ನರಕ ಎಂದು ಹೇಳಿದ್ದಾಗಿ ಮಾಜಿ ಸಂಸದೆ ರಮ್ಯಾ ಮೇಲಿರುವ ಆರೋಪದ ಬಗ್ಗೆ ತನಗೇನು ಗೊತ್ತಿಲ್ಲ. ಅದಕ್ಕೆ ಪ್ರತಿಕ್ರಿಯೆ ಕೂಡ ಕೊಡಲ್ಲ ಎಂದವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯದಲ್ಲಿ ಮತ್ತೆ ಬರ:
ರಾಜ್ಯದಲ್ಲಿ ಭೀಕರವಾದ ಬರಗಾಲ ಬಂದಿದೆ. ಮೂರನೆ ವರ್ಷ ಸತತ ಈ ರೀತಿ ಆಗುತ್ತಿದೆ. ಅದಕ್ಕಾಗಿ ನಾನು ಕೊಲ್ಲೂರು ಶ್ರೀಮೂಕಾಂಬಿಕೆ ಹಾಗೂ ಶ್ರೀಕೃಷ್ಣ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಮಳೆಗಾಲ ಇನ್ನು ಕೆಲವೇ ದಿನ ಬಾಕಿ ಇದೆ. ಹಾಗಾಗಿ ಹೆಚ್ಚು ಮಳೆ ಬರಲಿ, ರಾಜ್ಯದಲ್ಲಿ ಇರುವ ಬರ ಪರಿಹಾರವಾದರೆ ಜನರಿಗೆ ಸುಭಿಕ್ಷೆ ಆಗುತ್ತದೆ. ರಾಜ್ಯದ ಆರ್ಥಿಕ ವ್ಯವಸ್ಥೆ ಕೂಡ ಅನುಕೂಲವಾಗುತ್ತದೆ