ಕ್ರೀಡೆಯಿಂದ ಆರೋಗ್ಯ ಮತ್ತು ನೆಮ್ಮದಿಯ ಬದುಕನ್ನು ಕಾಣಲು ಸಾಧ್ಯ: ಭವಾನಿ ಚಿದಾನಂದ
ಪುತ್ತೂರು, ಆ.26: ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯ ಮತ್ತು ನೆಮ್ಮದಿಯ ಬದುಕನ್ನು ಕಾಣಲು ಸಾಧ್ಯ ಎಂದು ಪುತ್ತೂರು ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಹೇಳಿದರು.
ಅವರು ದ.ಕ. ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸಂತ ವಿಕ್ಟರನ ಬಾಲಿಕ ಪ್ರೌಢಶಾಲೆ ಪುತ್ತೂರು ಇದರ ಸಹಯೋಗದಲ್ಲಿ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ ‘ಶಟ್ಲ್ ಬ್ಯಾಡ್ಮಿಟನ್ ಪಂದ್ಯಾಟವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಕೇವಲ ಪಠ್ಯ ಶಿಕ್ಷಣವೊಂದೇ ಸಾಲದು. ಅದರೊಂದಿಗೆ ಕ್ರೀಡೆ ಇನ್ನಿತರ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕು. ಕ್ರೀಡೆ ಭವಿಷ್ಯಕ್ಕೆ ಉತ್ತಮವಾಗಿದ್ದು, ಹೆತ್ತವರು ಮತ್ತು ಶಿಕ್ಷಕರು ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ವಿದ್ಯಾರ್ಥಿಗಳು ಪಂದ್ಯಾಟವನ್ನು ಸವಾಲಾಗಿ ಸ್ವೀಕರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ.ಫಾ. ಆಲ್ಫ್ರೆಡ್ ಜಾನ್ ಪಿಂಟೊ ಮಾತನಾಡಿ, ಆಟದಿಂದ ಕಠಿಣ ಶಿಸ್ತು ಮತ್ತು ನೀತಿಯನ್ನು ಪಡೆಯುವುದರೊಂದಿಗೆ ಎದುರಾಳಿಯನ್ನು ಯಾವ ರೀತಿಯಿಂದ ಎದುರಿಸಬೇಕು ಎಂಬ ಕಲಿಕೆ ಸಿಗುತ್ತದೆ ಎಂದರು. ನಗರಸಭಾಧ್ಯಕ್ಷೆ ಜಯಂತಿ ಬಲ್ನಾಡು ಶುಭ ಹಾರೈಸಿದರು.
ವೇದಿಕೆಯಲ್ಲಿ ಬಿಆರ್‌ಸಿ ಪ್ರದೀಪ್, ಸೈಂಟ್ ವಿಕ್ಟರ್ಸ್ ಬಾಲಿಕೆಯರ ಪ್ರೌಢಶಾಲೆಯ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಸುಬಾಷ್ ರೈ ಬೆಳ್ಳಿಪ್ಪಾಡಿ, ಕಾರ್ಯದರ್ಶಿ ಉಷಾ ಅಂಚನ್, ತಾಲೂಕು ಶಿಕ್ಷಕರ ಸಂಘದ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ, ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯಗುರು ಒಸ್ವಾಲ್ ರೋಡ್ರಿಗಸ್, ನಿವೃತ್ತ ಶಿಕ್ಷಕ ಜೆರೋಮಿಯನ್ ಪಾಯಸ್, ನಗರಸಭಾ ಸದಸ್ಯೆ ದೀಕ್ಷಾ ಪೈ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಸುಂದರ ಗೌಡ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸೈಂಟ್ ವಿಕ್ಟರ್ಸ್ ಬಾಲಿಕೆಯರ ಪ್ರೌಢಶಾಲಾ ಮುಖ್ಯಗುರು ರೋಸ್ಲಿನ್ ಲೋಬೊ ಸ್ವಾಗತಿಸಿದರು. ಸಹಶಿಕ್ಷಕ ಇನಾಸ್ ಗೋನ್ಸಾಲ್ವಿಸ್ ನಿರೂಪಿಸಿ, ವಂದಿಸಿದರು.