×
Ad

ಕೇಂದ್ರ ಸರಕಾರವೇ ಕಾನೂನು ತಂದರೆ ಉತ್ತಮ: ಸಚಿವ ಪರಮೇಶ್ವರ್

Update: 2016-08-26 18:29 IST

ಮಂಗಳೂರು, ಆ.26: ಗೋರಕ್ಷಣೆಯ ಹೆಸರಿನಲ್ಲಿ ದೇಶಾದ್ಯಂತ ಹಲ್ಲೆ, ಕೊಲೆ ಪ್ರಕರಣಗಳು ನಡೆಯುತ್ತಿವೆ. ಈ ವಿಚಾರ ವಿಶಾಲವಾದುದು. ಈ ಬಗ್ಗೆ ಕೇಂದ್ರ ಸರಕಾರ ಏನಾದರೂ ತೀರ್ಮಾನ, ಕಾನೂನು ತಂದರೆ ಉತ್ತಮವಾಗಿರುತ್ತದೆ ಎಂದು ರಾಜ್ಯದ ಗೃಹ ಸಚಿವ ಪರಮೇಶ್ವರ್ ಅಭಿಪ್ರಾಯಿಸಿದ್ದಾರೆ.

ಮಂಗಳೂರಿಗೆ ಇಂದು ಸಂಜೆಯ ವೇಳೆಗೆ ಭೇಟಿ ನೀಡಿದ ಅವರು, ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಗೌರವ ರಕ್ಷೆಯನ್ನು ಸ್ವೀಕರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

ಪ್ರಧಾನಿ ಮೋದಿಯವರೇ ಗೋರಕ್ಷಕರ ಹೆಸರಿನಲ್ಲಿ ದಾಂಧಲೆ ನಡೆಸುವವರ ದಾಖಲೆ ಸಂಗ್ರಹಿಸುವಂತೆ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿದ ಬಳಿಕವೂ ಕರಾವಳಿಯಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಕೊಲೆ ನಡೆದಿರುವ ಪ್ರಕರಣ ನಡೆದಿದೆ. ಈ ಬಗ್ಗೆ ಏನಾದರೂ ಕ್ರಮ ತೆಗೆದುಕೊಳ್ಳಲಾಗುವುದೇ ಎಂಬ ಪ್ರಶ್ನೆಗೆ, ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದೆ. ಯಾರಿಗೂ ಕಾನೂನು ಮುರಿಯಲು ಸಾಧ್ಯವಿಲ್ಲ ಎಂದರು.

ಕರಾವಳಿಯ ಯುವಕರು ಐಸಿಎಸ್ ಸೇರ್ಪಡೆಯಾಗುತ್ತಿರುವ ಆರೋಪಗಳ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಇಂತಹ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡೇ ಆಂತರಿಕ ಭದ್ರತಾ ವಿಭಾಗವು ಕಾರ್ಯ ನಿರ್ವಹಿಸುತ್ತದೆ. ಇಂತಹ ಸಂಘಟನೆಗಳು ಐಸಿಸ್‌ಗೆ ನೇಮಕಾತಿ, ಯುವಕರನ್ನು ಕರೆದೊಯ್ಯುತ್ತಿದ್ದಾರೆಂಬ ನಿಖರ ಮಾಹಿತಿ ನಮಗೆ ದೊರಕಿದ್ದಲ್ಲಿ ಅಂತಹ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು. ಕಾಸರಗೋಡು ವರದಿಯ ಬಳಿಕ ಈ ಕುರಿತಂತೆ ನಮ್ಮ ರಾಜ್ಯದಲ್ಲಿ ಅತ್ಯಂತ ಎಚ್ಚರಿಕೆಯಿಂದ ಈ ಬಗ್ಗೆ ನಿಗಾ ವಹಿಸಲಾಗುತ್ತಿದೆ ಎಂದು ಗೃಹ ಸಚಿವರು ತಿಳಿಸಿದರು.

ಪೊಲೀಸರ ವೇತನ ಪರಿಷ್ಕರಣೆ ಕುರಿತಂತೆ ಸಮಿತಿ ಮಾಡಲಾಗಿದ್ದು, ವರದಿ ಬಂದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು. ಆಡರ್ಲಿ ವ್ಯವಸ್ಥೆಯನ್ನು ತೆಗೆದುಹಾಕುವ ಕುರಿತಂತೆ ನಾನು ಬದ್ಧನಾಗಿದ್ದೇನೆ. ಆ ಪ್ರಕ್ರಿಯೆ ನಡೆಯುತ್ತಿದೆ. ಅವರನ್ನು ತೆಗೆಯಬೇಕೆಂದರೆ ಹಿರಿಯ ಅಧಿಕಾರಿಗಳಿಗೆ ಸಹಾಯಕರನ್ನು ಒದಗಿಸಬೇಕು. ಅದಕ್ಕಾಗಿ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಹಣಕಾಸು ಇಲಾಖೆ ಜತೆ ಮಾತುಕತೆ ನಡೆಸಲಾಗಿದೆ. ಹಿರಿಯ ಅಧಿಕಾರಿಗಳಿಗೆ ಸಹಾಯಕ ಸಿಬ್ಬಂದಿಗಳನ್ನು ಒದಗಿಸುವ ಕುರಿತು ಪ್ರಕ್ರಿಯೆ ನಡೆಯುತ್ತಿದೆ. ಸಹಾಯಕ ಸಿಬ್ಬಂದಿ ತರಬೇತು ಹೊಂದಿದ ಪೊಲೀಸರಾಗಿರುವುದಿಲ್ಲ ಎಂದವರು ಹೇಳಿದರು.

ಕೌನ್ಸೆಲಿಂಗ್ ಹಾಗೂ ವಿದ್ಯಾರ್ಥಿಗಳ ಸಂಖ್ಯೆಯ ಆಧಾರದಲ್ಲಿ ಶಿಕ್ಷಕರ ವರ್ಗಾವಣೆ ಮುಂದುವರಿದ ಕುರಿತಂತೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕೌನ್ಸಿಲಿಂಗ್ ಮೂಲಕ ಶಿಕ್ಷಕರನ್ನು ಬದಲಾವಣೆ ಮಾಡುವುದು, ವಿದ್ಯಾರ್ಥಿಗಳ ಸಂಖ್ಯೆ ಆಧಾರದಲ್ಲಿ ಉಳಿಸಿಕೊಳ್ಳಲು ಶಿಕ್ಷಣ ಇಲಾಖೆ ತೀರ್ಮಾನ ತೆಗೆದುಕೊಂಡು, ಅದಕ್ಕೊಂದು ವ್ಯವಸ್ಥೆಯನ್ನು ಮಾಡಿದೆ. ಆದರೆ ಪುತ್ತೂರು ಹಾರಾಡಿ ಶಾಲೆಯ ವಿದ್ಯಾರ್ಥಿ ದಿವಿತ್ ಪತ್ರ ಬರೆದ ಪ್ರಕರಣಕ್ಕೆ ಸಂಬಂಧಿಸಿ ಆ ಶಾಲೆಯಲ್ಲಿ 450 ವಿದ್ಯಾರ್ಥಿಗಳಿದ್ದಾರೆ. 15 ಮಂದಿ ಶಿಕ್ಷಕರು. ಈ ಯೋಜನೆಯಡಿ 4 ಜನ ಶಿಕ್ಷಕರನ್ನು ತೆಗೆಯಲು ಮುಂದಾದಾಗ ಅಲ್ಲಿನ ಮಕ್ಕಳಿಗೆ ಪಾಠ ಹೇಳಿಕೊಡಲು ಮತ್ತು ಸಂಖ್ಯೆಗುಣವಾಗಿ ತೆಗೆದರೆ ತೊಂದರೆ ಯಾಗುತ್ತದೆ ಎಂದು ದಿವಿತ್ ಎಂಬ ವಿದ್ಯಾರ್ಥಿ ನನಗೆ ಸಂದೇಶ ಕಳುಹಿಸಿದ್ದ. ಅದಕ್ಕೆ ತಕ್ಷಣ ಸ್ಪಂದಿಸಿ ಶಿಕ್ಷಣ ಸಚಿವ ತನ್ವೀರ್ ಸೇಠ್‌ಗೆ ತಿಳಿಸಿದೆ. ಆದರೆ ಈ ನಡುವೆ ಸಚಿವರ ನಡುವೆ ಆದ ಮಾತುಕತೆ ಡಿಡಿಪಿಐಗೆ ತಿಳಿದಿರಲಿಲ್ಲ. ಅವರು ವರ್ಗಾವಣೆ ಮಾಡಿದಾಗ ಆ ವಿದ್ಯಾರ್ಥಿ ಮತ್ತೆ ಸಂದೇಶ ಕಳುಹಿಸಿದಾಗ ಈ ಬಗ್ಗೆ ಸಚಿವ ತನ್ವೀರ್ ಸೇಠ್‌ಗೆ ತಿಳಿಸಿ, ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸುವಂತೆ ಸಲಹೆ ನೀಡಿದೆ. ಅದರಂತೆ ಶಿಕ್ಷಕರ ವರ್ಗಾವಣೆ ರದ್ದುಪಡಿಸಲಾಯಿತು. ಇಡೀ ರಾಜ್ಯದಲ್ಲಿ ಕೌನ್ಸೆಲಿಂಗ್ ಹಾಗೂ ಸಂಖ್ಯಾಧಾರದಲ್ಲಿ ಮರು ನೇಮಕ ಮಾಡುವುದು ಎಷ್ಟು ಸರಿ ಎಂಬ ಬಗ್ಗೆ ಪರಿಶೀಲನೆ ಮಾಡುವಂತೆ ಸಚಿವರಿಗೆ ಕ್ಯಾಬಿನೆಟ್‌ನಲ್ಲಿ ತಿಳಿಸಿದ್ದೆ. ಈ ವರ್ಷ ಈಗಾಗಲೇ ಪ್ರಕ್ರಿಯೆ ನಡೆದಿರುವುದರಿಂದ ಗೊಂದಲ ಆಗುತ್ತದೆ. ಈ ಬಗ್ಗೆ ಮುಂದಿನ ವರ್ಷ ಪರಿಶೀಲನೆ ಮಾಡುವುದಾಗಿ ಅವರು ತಿಳಿಸಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ವಿವಾದ ಕೇಂದ್ರಬಿಂದುವಾಗಿದ್ದ ಸಂದರ್ಭದಲ್ಲಿ, ಪಕ್ಷದ ಯುವ ನಾಯಕಿಯನ್ನು ಹಬ್ಬದ ಸಂದರ್ಭ ಮಂಗಳೂರು ಭೇಟಿಗೆ ಅನುಮತಿಸಿದ್ದು ಅಪಾಯಕಾರಿಯಾಗುವ ಸಾಧ್ಯತೆ ಇತ್ತಲ್ಲವೇ? ಎಂಬ ಪ್ರಶ್ನೆಗೆ, ಇಂತಹ ಪ್ರತಿಭಟನೆಗಳು ನಡೆಯುತ್ತಿರುತ್ತವೆ. ಹಾಗೆಂದು ಸಾರ್ವಜನಿಕ ಜೀವನದಲ್ಲಿ ಇರುವವರು ಹೆದರಿ ಕೂರಲು ಆಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಬೇಕೆಂದೇ ಈ ರೀತಿಯ ವಾತಾವರಣ ಸೃಷ್ಟಿಸಲಾಗುತ್ತದೆ. ಅದು ರಿಸ್ಕ್‌ನ ಪ್ರಶ್ನೆ ಅಲ್ಲ. ಇಲ್ಲಿ ಕೂಡಾ ಕಾಂಗ್ರೆಸ್ ನಾಯಕರಿದ್ದಾರೆ. ಮಂಗಳೂರಿನ ಜನ ಆತಿಥ್ಯಕ್ಕೆ ಹೆಸರಾದವರು. ಮಂಗಳೂರಿನ ಜನ ಈ ರೀತಿಯಾಗಿ ನಡೆದುಕೊಳ್ಳುತ್ತಾರೆಂದು ಊಹಿಸಲೂ ಸಾಧ್ಯವಿಲ್ಲ. ಮಂಗಳೂರಿನವರು ಒಳ್ಳೆಯವರು. ಬೆಂಗಳೂರಿಗೆ ಪರ್ಯಾಯವಾಗಿರುವ ನಗರ ಮಂಗಳೂರು. ಇಂತಹ ಸಣ್ಣ ಪುಟ್ಟ ಘಟನೆಗಳು ಮಂಗಳೂರಿಗೆ ಹೊಂದಾಣಿಕೆ ಆಗುವುದಿಲ್ಲ ಎಂದು ಹೇಳಿದರು. 

ಉಡುಪಿಯ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಸತ್ಯಾಸತ್ಯತೆ ತನಿಖೆ ಮೂಲಕ ಹೊರಗೆ ಬರಲಿ. ಇಲಾಖೆಯಿಂದ ವಿಳಂಬ, ಸಾಕ್ಷ ನಾಶ ಮಾಡಿದರೆ ಅದು ಹೊರ ಬರುವುದು. ನಾವು ಸಿಐಡಿಗೆ ಕೊಟ್ಟಿದ್ದೇವೆ. ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಊಹಾಪೋಹದ ಮೇಲೆ ಮಾಧ್ಯಮದಲ್ಲಿ ಸುದ್ದಿಗಳು ಬರುತ್ತಿವೆ. ಆದರೆ ವರದಿ ಬಾರದೆ ನಾವೇನೂ ಹೇಳಲು ಸಾಧ್ಯವಿಲ್ಲ. ಅಧಿಕೃತವಾಗಿ ನಾನಾಗಲಿ, ಸರಕಾರವಾಗಲಿ ಏನೂ ಹೇಳಲು ಸಾಧ್ಯವಿಲ್ಲ. ವರದಿಯನ್ನು ನಾವು ಶೀಘ್ರವಾಗಿ ಬರುವುದನ್ನು ಎದುರು ನೋಡುತ್ತಿದ್ದೇವೆ ಎಂದು ಸಚಿವ ಪರಮೇಶ್ವರ್ ಹೇಳಿದರು.

ಪೊಲೀಸ್ ಆಯುಕ್ತ ಚಂದ್ರಶೇಖರ್, ವರಿಷ್ಠಾಧಿಕಾರಿ ಗುಲಾಬ್ ರಾವ್ ಬೊರಸೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News