ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮೀನುಗಾರಿಕಾ ಅಭಿವೃದ್ಧಿ ಯೋಜನೆಗಳು ಕುಂಠಿತ: ಪ್ರಮೋದ್ ಮಧ್ವರಾಜ್

Update: 2016-08-26 14:32 GMT

ಮಂಗಳೂರು, ಆ.26: ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಮೀನುಗಾರಿಕಾ ಅಭಿವೃದ್ದಿಯ ಯೋಜನೆಗಳು ಕುಂಠಿತವಾಗಿದೆ ಎಂದು ಮೀನುಗಾರಿಕಾ ಮತ್ತು ಯುವಜನ ಕ್ರೀಡೆ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.

ಅವರು ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮೀನುಗಾರಿಕಾ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರವಿದ್ದಾಗ ಎಲ್ಲಾ ಮೀನುಗಾರಿಕಾ ಯೋಜನೆಗಳಿಗೆ 75 ಶೇ. ಕೇಂದ್ರ ಸರಕಾರ ಅನುದಾನ ನೀಡುತ್ತಿತ್ತು. 25 ಶೇ.ವನ್ನು ರಾಜ್ಯ ಸರಕಾರ ಭರಿಸಬೇಕಿತ್ತು. ಆದರೆ ಇದೀಗ ಕೇಂದ್ರ ಸರಕಾರವು ಶೇಕಡ 50ರಷ್ಟು ಮಾತ್ರ ಅನುದಾನ ನೀಡುತ್ತಿದೆ. ಇದರಿಂದ ಮೀನುಗಾರಿಕಾ ಯೋಜನೆಗಳಿಗೆ ಬೇಕಾದ ದೊಡ್ಡ ಮೊತ್ತವನ್ನು ಭರಿಸಲು ರಾಜ್ಯ ಸರಕಾರಕ್ಕೆ ಕಷ್ಟವಾಗುತ್ತಿದೆ ಎಂದು ಹೇಳಿದರು.

ಕುಳಾಯಿ ಬಂದರು ನಿರ್ಮಾಣಕ್ಕೆ 230 ಕೋಟಿ ರೂ. ಬೇಕಾಗಿದ್ದು, ಇದರ 50 ಶೇಕಡವನ್ನು ಕೇಂದ್ರ ಸರಕಾರ ಭರಿಸುತ್ತದೆ. ಉಳಿದ ದೊಡ್ಡ ಮೊತ್ತದ ಹಣವನ್ನು ರಾಜ್ಯ ಸರಕಾರ ಭರಿಸಬೇಕಾಗಿದೆ. ಅದೇ ರೀತಿ ಮಂಗಳೂರು 3ನೆ ಹಂತದ ಬಂದರು ಕಾಮಗಾರಿಗೆ ಕೇಂದ್ರದಿಂದ 33 ಕೋ.ರೂ. ಅನುದಾನ ಬರಲು ಬಾಕಿಯಿದೆ. ಮಲ್ಪೆ ಬಂದರಿನ 8 ಕೋಟಿ ರೂ. ಕೇಂದ್ರದ ಪಾಲು ಬರಲು ಬಾಕಿಯಿದೆ. ಈ ಬಗ್ಗೆ ಕರಾವಳಿ ಜಿಲ್ಲೆಗಳ ಮೂವರು ಸಂಸದರೊಂದಿಗೆ ಸೇರಿಕೊಂಡು ಕೇಂದ್ರ ಸಚಿವರ ಜೊತೆ ಸೆ.28 ರಂದು ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.

ಮಂಗಳೂರು 2 ಮತ್ತು 3ನೆ ಬಂದರನ್ನು ಸಂಪರ್ಕಿಸಲು ಬೇಕಾದ ರಸ್ತೆ, ಸೇತುವೆ, ವಿದ್ಯುಚ್ಛಕ್ತಿ, ನೀರು ಪೂರೈಕೆಯ ವ್ಯವಸ್ಥೆಯನ್ನು ಮಾಡಲು ನಿರ್ಧರಿಸಿದ್ದು ಈ ಬಗ್ಗೆ ಇಂಜಿನಿಯರ್‌ಗಳ ಜೊತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ದ.ಕ ಜಿಲ್ಲಾಧಿಕಾರಿ ಡಾ.ಜಗದೀಶ್, ಶಾಸಕ ಜೆ.ಆರ್. ಲೋಬೊ, ಮೀನುಗಾರಿಕಾ ಇಲಾಖೆಯ ನಿರ್ದೇಶಕ ವೀರಪ್ಪ ಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News