ಪ್ರಧಾನ 91 ಜಲಾಶಯಗಳ ನೀರಿನ ಮಟ್ಟ ಶೇ.65ಕ್ಕೇರಿಕೆ

Update: 2016-08-26 14:51 GMT

ಹೊಸದಿಲ್ಲಿ, ಆ.26: ದೇಶದ 91 ಪ್ರಧಾನ ಜಲಾಶಯಗಳ ಒಟ್ಟು ಸಂಗ್ರಹ ಸಾಮರ್ಥ್ಯದ ಶೇ.61ರಷ್ಟು ನೀರು ಕಳೆದ ವಾರವಿತ್ತು. ಅದು ಈ ವಾರದಲ್ಲಿ ಶೇ.65ಕ್ಕೆ ಏರಿಕೆಯಾಗಿದೆ.

ಆ.24ಕ್ಕೆ ಅಂತ್ಯಗೊಂಡ ವಾರದಲ್ಲಿ ಈ ಜಲಾಶಯಗಳಲ್ಲಿ ಒಟ್ಟು 102.147 ಶತಕೋಟಿ ಘನ ಮೀಟರ್(ಬಿಸಿಎಂ) ನೀರಿನ ಲಭ್ಯತೆಯಿದೆಯೆಂದು ಜಲ ಸಂಪನ್ಮೂಲ ಸಚಿವಾಲಯ ತಿಳಿಸಿದೆ.

ಇದು ಕಳೆದ ವರ್ಷ ಇದೇ ಅವಧಿಗಿದ್ದ ನೀರಿನ ಸಂಗ್ರಹಕ್ಕಿಂತ ಶೇ.12ರಷ್ಟು ಹೆಚ್ಚು. ಅಲ್ಲದೆ ಕಳೆದ 10 ವರ್ಷಗಳ ಸರಾಸರಿ ಸಂಗ್ರಹದ ಶೇ.102 ರಷ್ಟಾಗಿದೆ.

ಈ ಜಲಾಶಯಗಳ ಒಟ್ಟು ಧಾರಣ ಸಾಮರ್ಥ್ಯ 157.799 ಬಿಸಿಎಂ.

ಹಿಮಾಚಲಪ್ರದೇಶ, ಪಂಜಾಬ್, ತ್ರಿಪುರ, ಉತ್ತರಾಖಂಡ, ಛತ್ತೀಸ್‌ಗಡ, ಕೇರಳ, ಆಂಧ್ರಪ್ರದೇಶ ಹಾಗೂ ತಮಿಳುನಾಡುಗಳ ಪ್ರಮುಖ ಜಲಾಶಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಮಟ್ಟ ಕಡಿಮೆಯಿದೆಯೆಂದು ವರದಿಯಾಗಿದೆ.

 ರಾಜಸ್ಥಾನ, ಜಾರ್ಖಂಡ್, ಒಡಿಶಾ, ಮಹಾರಾಷ್ಟ್ರ, ಗುಜರಾತ್, ಪಶ್ಚಿಮಬಂಗಾಳ, ಉತ್ತರಪ್ರದೇಶ, ಮಧ್ಯಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕಗಳಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ನೀರು ಸಂಗ್ರಹವಾಗಿದೆ ಎನ್ನಲಾಗಿದೆ.

ದೇಶದ ಎಲ್ಲ ಜಲಾಶಯಗಳ ಒಟ್ಟು ಸಂಗ್ರಹ ಸಾಮರ್ಥ್ಯ ಅಂದಾಜು 253.388 ಬಿಸಿಎಂ. 37 ಪ್ರಧಾನ ಜಲಾಶಯಗಳಲ್ಲಿ 60 ಮೆ.ವಾ ಗೂ ಹೆಚ್ಚು ಸಾಮರ್ಥ್ಯದ ಜಲವಿದ್ಯುದಾಗಾರಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News