×
Ad

ಮೂಡುಮಾರ್ನಾಡಿನಲ್ಲಿ ನವ ವಿವಾಹಿತೆ ಆತ್ಮಹತ್ಯೆ: ವರದಕ್ಷಿಣೆ ಕಿರುಕುಳ ಆರೋಪ; ದೂರು

Update: 2016-08-26 21:34 IST

 ಮೂಡುಬಿದಿರೆ, ಆ.26: ಮಾವ ಮತ್ತು ನಾದಿನಿಯರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನವ ವಿವಾಹಿತೆಯೋರ್ವರು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಆರೋಪಿಸಿ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತ ನವವಿವಾಹಿತೆಯ ತಾಯಿ ವಾರಿಜಾ ಶೆಟ್ಟಿ ಎಂಬವರು ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದಾರೆ.

ಆತ್ಮಹಹತ್ಯೆಗೆ ಶರಣಾದ ಮಹಿಳೆಯನ್ನು ಮೂಡುಮಾರ್ನಾಡಿನ ಸ್ವಾತಿ ಶೆಟ್ಟಿ (25) ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ನಿವಾಸಿಯಾಗಿದ್ದ ಸ್ವಾತಿ ಶೆಟ್ಟಿ ಅವರನ್ನು ಮೂಡುಬಿದಿರೆ ಸಮೀಪದ ಮೂಡುಮಾರ್ನಾಡಿನ ದರ್ಖಾಸು ಮನೆಯ ಬೋಜ ಶೆಟ್ಟಿ ಎಂಬವರ ಪುತ್ರ ಶರತ್ಚಂದ್ರ ಎಂಬವರಿಗೆ 2014ರಲ್ಲಿ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಒಂದು ತಿಂಗಳಲ್ಲಿ ಶರತ್ಚಂದ್ರ ವಿದೇಶಕ್ಕೆ ತೆರಳಿದ್ದರು. ಎಂಎಸ್‌ಡಬ್ಲ್ಯು ಪದವೀಧರೆಯಾಗಿದ್ದ ಸ್ವಾತಿ ಮಂಗಳೂರಿನಲ್ಲಿ ನೌಕರಿಗೆ ಹೋಗಿ ಬರುತ್ತಿದ್ದರು. ಸ್ವಾತಿಯನ್ನು ಮಾವ ಸದಾ ಸಂಶಯದಿಂದ ಕಾಣುತ್ತಿದ್ದರು ಎಂದು ಆರೋಪಿಸಲಾಗಿದೆ.

ಆ.13ರಂದು ಸ್ವಾತಿ ತನ್ನ ತಾಯಿ ಮನೆಗೆ ತೆರಳಿದ್ದು, ತನ್ನ ತಾಯಿಯ ಬಳಿ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದರು. ಆಗ ತಾಯಿ ಆಕೆಯನ್ನು ಸಮಾಧಾನಿಸಿ ಗಂಡನ ಮನೆಗೆ ತೆರಳುವಂತೆ ತಿಳಿಸಿದ್ದರು. ಗುರುವಾಯನಕೆರೆ ಬಂಟರ ಯುವ ಸಂಘದ ನಿರ್ದೇಶಕಿಯಾಗಿದ್ದ ಆಕೆಯನ್ನು ಅಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೋಗುವಂತೆ ತಿಳಿಸಿದ್ದರು. ಈ ಸಂದರ್ಭದಲ್ಲಿಯೇ ಆಕೆಯ ಮಾವ ಭೋಜ ಶೆಟ್ಟಿ ಸೊಸೆಗೆ ಕರೆ ಮಾಡಿ ಸಂಶಯದಿಂದ ಮಾತನಾಡಿದ್ದಾರೆ. ಈ ಬಗ್ಗೆಯೂ ಆಕೆ ತನ್ನ ತಾಯಿಗೆ ಕರೆ ಮಾಡಿ ತಿಳಿಸಿದ್ದರು. ಮತ್ತೆ ಸಂಜೆಯವರೆಗೂ ಮಗಳು ಕರೆಯನ್ನು ಸ್ವೀಕರಿಸದಿದ್ದಾಗ ಪಕ್ಕದ ಮನೆಯ ಶಶಿ ಎಂಬವರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಶಶಿ ಅವರು ಬೋಜ ಶೆಟ್ಟಿ ಅವರ ಮನೆಗೆ ಬಂದು ನೋಡಿದಾಗ ಸ್ವಾತಿ ಅವರು ವಿಷ ಪದಾರ್ಥ ಸೇವಿಸಿ ಅರೆಪ್ರಜ್ಞಾವಸ್ಥೆಯಲ್ಲಿ ಕಂಡು ಬಂದಿದ್ದು, ತಕ್ಷಣ ಅವರನ್ನು ಮೂಡುಬಿದಿರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಆ.18ರಂದು ಸಾವನ್ನಪ್ಪಿದ್ದು, ಆರಂಭದಲ್ಲಿ ಆತ್ಮಹತ್ಯೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

ಆದರೆ ಇದೀಗ ಸ್ವಾತಿಯ ತಾಯಿ ವಾರಿಜ ಅವರು ಶುಕ್ರವಾರ ವರದಕ್ಷಿಣೆಗಾಗಿ ಕಿರುಕುಳ ನೀಡಿ ತನ್ನ ಮಗಳು ಸಾವನ್ನಪ್ಪುವಂತೆ ಮಾಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದಾರೆ. ಮೂಡುಬಿದಿರೆ ಪೊಲೀಸರು ಇದೀಗ ಇನ್ನೊಂದು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News