×
Ad

ಹಾಜಿ ಅಲಿ ದರ್ಗಾ ಪ್ರವೇಶಿಸಲು ಮಹಿಳೆಯರಿಗೂ ಹಕ್ಕಿದೆ: ಹೈಕೋರ್ಟ್

Update: 2016-08-26 22:41 IST

ಮುಂಬೈ, ಆ.26: ಮುಂಬೈಯ ಪ್ರಸಿದ್ಧ ಹಾಜಿ ಅಲಿ ದರ್ಗಾ ಒಳಗಿನ ಭಾಗಕ್ಕೆ ಪ್ರವೇಶಿಸಲು ಮಹಿಳೆಯರಿಗೂ ಹಕ್ಕಿದೆಯೆಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ. ಆದರೆ, ಈ ಆದೇಶ ಈಗಲೇ ಮಹಿಳೆಯರಿಗೆ ಲಭಿಸಿಲ್ಲ. ದರ್ಗಾವನ್ನು ನಡೆಸುತ್ತಿರುವ ಟ್ರಸ್ಟ್ ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ದಾಖಲಿಸಲು ನಿರ್ಧರಿಸಿದೆ. ಆದುದರಿಂದ ಇಂದಿನ ಹೈಕೋರ್ಟ್ ಆದೇಶವನ್ನು 6 ವಾರಗಳ ಕಾಲ ಅಮಾನತಿನಲ್ಲಿರಿಸಲಾಗಿದೆ.

ಮಸೀದಿಯೂ ಒಳಗೊಂಡಿರುವ ಸೂಫಿ ಸಂತನ ಗೋರಿಯ ಬಳಿಗೆ ಹೋಗಲು ಮಹಿಳೆಯರಿಗೆ ಅವಕಾಶ ನೀಡುವುದು ‘ಘೋರ ಪಾಪವಾಗಿದೆ’ ಯೆಂದು 15ನೆ ಶತಮಾನದ ದರ್ಗಾದ ವಿಶ್ವಸ್ತರು ಹೇಳುತ್ತಿದ್ದಾರೆ. ಅವರು 5 ವರ್ಷದ ಹಿಂದೆ ಮಹಿಳೆಯರ ಪ್ರವೇಶಕ್ಕೆ ನಿಷೇಧ ಹೇರಿದ್ದಾರೆ. ಮುಸ್ಲಿಂ ಮಹಿಳೆಯರ ಬಲಪಂಥೀಯ ಗುಂಪಾಗಿರುವ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನವು(ಬಿಎಂಎಂಎ) ನಿಷೇಧದ ವಿರುದ್ಧ ನ್ಯಾಯಾಲಯದ ಮೆಟ್ಟಲೇರಿತ್ತು. ಅದಕ್ಕೆ ರಾಜ್ಯ ಸರಕಾರದ ಬೆಂಬಲವಿದೆ.
ಆರಾಧನೆಯಲ್ಲಿ ತಾರತಮ್ಯದ ವಿರುದ್ಧ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬಹಿರಂಗವಾಗಿಯೇ ಮಾತನಾಡಿದ್ದರು ಹಾಗೂ ಪದ್ಧತಿಗಳು ಬದಲಾವಣೆಗೆ ಮುಕ್ತವಾಗಿರಬೇಕು ಎಂದಿದ್ದರು.
ದರ್ಗಾದಲ್ಲಿ ಮಹಿಳೆಯರಿಗೆ ಯಾವುದೇ ನಿರ್ಬಂಧವು ಸಮಾನತೆಯ ಹಕ್ಕಿನ ಉಲ್ಲಂಘನೆಯಾಗುತ್ತದೆಂದು ನ್ಯಾಯಾಲಯವಿಂದು ಹೇಳಿದೆ. ಸೂಫಿ ಸಂತರನ್ನು ಹೆತ್ತವರು ಹೆಂಗಸರಲ್ಲವೇ? ಎಂದು ಸಂಘಟನೆಯ ನಾಯಕಿ ಬಿಬಿ ಖಾನೂನು ಎಂಬವರು ಪ್ರಶ್ನಿಸಿದ್ದಾರೆ.
ಕರಾವಳಿಯಿಂದಾಚೆಗೆ 500 ಮೀ. ದೂರದ ನಡುಗಡ್ಡೆಯೊಂದರಲ್ಲಿ ಹಾಜಿ ಅಲಿ ಮಸೀದಿಯಿದೆ. ಸಮುದ್ರದಲ್ಲಿ ಇಳಿತವಿದ್ದಾಗ ಮಾತ್ರ ಅಲ್ಲಿಗೆ ಹೋಗಲು ಸಾಧ್ಯ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News