×
Ad

ಅರೆಸ್ಸೆಸ್ ಮುಖಂಡನ ದಾಳಿಯ ಹಿಂದೆ ಶಿವಸೇನೆ!

Update: 2016-08-26 23:15 IST

ಜಲಂಧರ್,ಆ.26: ಆರೆಸ್ಸೆಸ್‌ನ ಪಂಜಾಬ್ ಘಟಕದ ಉಪಮುಖ್ಯಸ್ಥ ಜಗದೀಶ್ ಗಗ್ನೇಜಾ ಅವರ ಮೇಲೆ ಆಗಸ್ಟ್ 6ರಂದು ನಡೆದ ಗುಂಡಿನ ದಾಳಿ ಪ್ರಕರಣದ ತನಿಖೆಯನ್ನು ಪಂಜಾಬ್ ಸರಕಾರವು ಸಿಬಿಐಗೆ ಹಸ್ತಾಂತರಿಸಿದ ಒಂದು ದಿನದ ಬಳಿಕ ಜಲಂಧರ್ ಪೊಲೀಸರು, ಗುರುವಾರ ಶಂಕಿತ ಆರೋಪಿಗಳಾದ ನಾಲ್ವರು ಶಿವಸೇನೆ ಕಾರ್ಯಕರ್ತರನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಲೂಧಿಯಾನದ ಶಿವಸೇನೆ ನಾಯಕ ಅಮಿತ್‌ ಆರೋರಾ, ಶಿವಸೇನೆ ಯುವಘಟಕದ ನಾಯಕರಾದ ಸಮರ್‌ ಡಿಸೋಜಾ ಹಾಗೂ ಭಾರತಿ ಸಂಧು ಮತ್ತು ಅರೋರಾ ಅವರ ಕೆಲಸದಾಳು ಮಾನಿ ಶಂಕಿತ ಆರೋಪಿಗಳಾಗಿದ್ದಾರೆ. ಈ ನಾಲ್ವರನ್ನು ಪೊಲೀಸರು ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅವರನ್ನು ವಿಚಾರಣೆಗಾಗಿ 7 ದಿನಗಳ ಪೊಲೀಸ್ ಕಸ್ಟಡಿಗೊಪ್ಪಿಸಲಾಗಿದೆ.
  
ಭದ್ರತಾ ಬೆಂಗಾವಲು ವಾಹನ ಹಾಗೂ ಹೆಚ್ಚುವರಿ ಗನ್‌ಮೆನ್ ಭದ್ರತೆಯನ್ನು ಪಡೆದುಕೊಳ್ಳುವ ಉದ್ದೇಶದಿಂದ ಅಮಿತ್ ಆರೋರಾ, ತಾನಾಗಿಯೇ ತನ್ನ ಮೇಲೆ ಕೃತ್ರಿಮ ದಾಳಿಯನ್ನು ಆಯೋಜಿಸಿದ್ದಕ್ಕಾಗಿ ಆತನನ್ನು ಮತ್ತು ಸಹಚರರಾದ ಸಮರ್ ಡಿಸೋಜಾ ಹಾಗೂ ಮಾನಿ ಅವರನ್ನು ಪೊಲೀಸರು ಜೂನ್ 24ರಂದು ಬಂಧಿಸಿದ್ದರು. ಜಲಂಧರ್ ಜೈಲಿನಲ್ಲಿರಿಸಲಾಗಿದ್ದ ಅವರನ್ನು ಗಗ್ನೇಜಾ ಅವರ ಹತ್ಯೆ ಯತ್ನ ಪ್ರಕರಣದ ವಿಚಾರಣೆಗೆ ಸಂಬಂಧಿಸಿ ನಿನ್ನೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.

ಗಗ್ನೇಜಾ ಅವರ ಮೇಲೆ ನಡೆದ ದಾಳಿಯ ಹಿಂದೆ ಶಿವಸೇನಾ ನಾಯಕರ ಕೈವಾಡವಿರಬಹುದೆಂಬ ಶಂಕೆಯಲ್ಲಿ ಈ ನಾಲ್ವರನ್ನು ಬಂಧಿಸಲಾಗಿದ್ದು, ಅವರ ವಿಚಾರಣೆಯಿಂದ ಮಹತ್ವದ ಸುಳಿವು ಲಭ್ಯವಾಗುವ ನಿರೀಕ್ಷೆಯಿದೆಂದು ಅಧಿಕೃತ ಮೂಲಗಳು ತಿಳಿಸಿವೆ.

ಗಗ್ನೇಜಾ ಅವರಿಗೆ ಆಗಸ್ಟ್ 6ರಂದು ಗುಂಡಿಕ್ಕಲಾಗಿತ್ತು. ಗಂಭೀರವಾಗಿ ಗಾಯಗೊಂಡಿರುವ ಅವರು ಲೂಧಿಯಾನದ ಆಸ್ಪತ್ರೆಯಲ್ಲಿ ಸಾವುಬದುಕಿನ ನಡುವೆ ಹೋರಾಡುತ್ತಿದ್ದಾರೆ.. ಅವರ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆಯೆಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News