×
Ad

ಉಪ್ಪಿನಂಗಡಿ: ಚಿನ್ನಾಭರಣ ದರೋಡೆಗೈಯಲು ಬಂದವರು ಚಿಲ್ಲರೆ ಹಣದೊಂದಿಗೆ ಪರಾರಿಯಾದರು

Update: 2016-08-26 23:17 IST

ಉಪ್ಪಿನಂಗಡಿ, ಆ.26: ಇಲ್ಲಿನ ರಾಮನಗರದ ಜನವಸತಿ ಪ್ರದೇಶದಲ್ಲಿರುವ ಮನೆಗೆ ಹಾಡಹಗಲೇ ನುಗ್ಗಿರುವ ಕಳ್ಳರು ಚಿನ್ನಾಭರಣಕ್ಕಾಗಿ ಹುಡುಕಾಡಿ ಅದು ಸಿಗದಿದ್ದಾಗ ಕಾಣಿಕೆ ಡಬ್ಬಿಯಲ್ಲಿದ್ದ ಚಿಲ್ಲರೆ ಹಣದೊಂದಿಗೆ ಪರಾರಿಯಾದ ಘಟನೆ ಶುಕ್ರವಾರ ನಡೆದಿದೆ.

ರಾಮನಗರದ ಜನತಾ ಕಾಲನಿ ನಿವಾಸಿ ಅಚ್ಯುತ ಪಡಿಯಾರ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಅಚ್ಯುತ ಪಡಿಯಾರ್ ಉದ್ಯಮಿಯಾಗಿದ್ದು, ಉಪ್ಪಿನಂಗಡಿಯಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಶುಕ್ರವಾರ ಕೂಡಾ ಎಂದಿನಂತೆ ತನ್ನ ಅಂಗಡಿಗೆ ತೆರಳಿದ್ದಾರೆ. ಪತಿಗೆ ವ್ಯವಹಾರದಲ್ಲಿ ಸಹಕರಿಸಲೆಂದು ಪೂರ್ವಾಹ್ನ 11ಗಂಟೆಗೆ ಎಂದಿನಂತೆ ಅಚ್ಯುತ ಪಡಿಯಾರ್ ಅವರ ಪತ್ನಿ ಕೂಡಾ ಪತಿಯ ಅಂಗಡಿಗೆ ತೆರಳಿದ್ದಾರೆ. ಆದರೆ ಮಧ್ಯಾಹ್ನ ಎರಡರ ಸುಮಾರಿಗೆ ಅವರು ಮನೆಗೆ ಬಂದು ನೋಡುವಾಗ ಕಳ್ಳತನ ವಿಷಯ ಬೆಳಕಿಗೆ ಬಂದಿದೆ.

ಕೀಲಿ ಕೈ ತೆಗೆದೇ ಪ್ರವೇಶಿಸಿದ್ದರು !

ಈ ಮನೆಗೆ ಮುಂಭಾಗವೇ ಎರಡು ಬಾಗಿಲಿದ್ದು, ಇವರು ಯಾವಾಗಲು ಮನೆಯಿಂದ ಹೋಗುವಾಗ ಪ್ರಧಾನ ಬಾಗಿಲಿನ ಚಿಲಕವನ್ನು ಒಳಗಿನಿಂದ ಹಾಕಿ ಬಳಿಕ ಎರಡನೆ ಬಾಗಿಲಿಗೆ ಬೀಗ ಹಾಕಿ ತೆರಳುತ್ತಿದ್ದರು. ಅಲ್ಲದೇ, ಕೀಲಿ ಕೈಯನ್ನು ಮನೆ ಬದಿಯಲ್ಲಿಯೇ ಇರುವ ಸ್ನಾನಗೃಹದಲ್ಲಿರುವ ಸಾಬೂನು ಪೆಟ್ಟಿಯಲ್ಲಿ ಅಡಗಿಸಿಡುತ್ತಿದ್ದರು. ಇವರ ಮನೆಗೆ ನುಗ್ಗಿದ ಕಳ್ಳರು ಕೂಡಾ ಇವರು ಸ್ನಾನ ಗೃಹದಲ್ಲಿ ಅಡಗಿಸಿಟ್ಟಿರುವ ಕೀಲಿಕೈಯನ್ನು ತೆಗೆದು ಮನೆಯ ಬೀಗ ತೆಗೆದು ಒಳ ಪ್ರವೇಶಿಸಿದ್ದು, ಮನೆಯಲ್ಲಿದ್ದ ಮೂರು ಕಪಾಟುಗಳನ್ನು ಜಾಲಾಡಿ, ಚೆಲ್ಲಾಪಿಲ್ಲಿಯಾಗಿಸಿದ್ದರು. ಅಲ್ಲದೇ, ಮಂಚದ ಮೇಲೆ ಹಾಸಲಾಗಿದ್ದ ಹಾಸಿಗೆಯನ್ನು ಎತ್ತಿ ಕೂಡಾ ನೋಡಿದ್ದರು. ಆದರೆ ಅಲ್ಲೇನು ಸಿಗದಿದ್ದಾಗ ದೇವರ ಕೋಣೆಗೆ ನುಗ್ಗಿದ ಕಳ್ಳರು ಅಲ್ಲಿದ್ದ ಶ್ರೀ ಗಣೇಶೋತ್ಸವ ಡಬ್ಬಿಯನ್ನು ಒಡೆದು ಅದರಲ್ಲಿದ್ದ ಚಿಲ್ಲರೆಯನ್ನು ಕದ್ದಿದ್ದಾರೆ. ಹೋಗುವಾಗ ತಾವು ತಂದಿದ್ದ ಕತ್ತಿಯನ್ನು ಸೋಪಾದ ಮೇಲಿಟ್ಟು ಪ್ರಧಾನ ಬಾಗಿಲಿನ ಚಿಲಕವನ್ನು ಒಳಗಿನಿಂದ ತೆಗೆದು ಆ ಮೂಲಕ ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಆಗಮಿಸಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News