ಆ.31ರಂದು ‘ಅಗ್ರಾಳ ಪುರಂದರ ರೈ ನೂರರ ನೆನಪು’
ಮಂಗಳೂರು, ಆ.26: ಕೃಷಿಕ, ಸ್ವಾತಂತ್ರ್ಯ ಹೋರಾಟಗಾರ, ಸಾಹಿತಿ, ಪತ್ರಕರ್ತ ಸಾಮಾಜಿಕ ಚಿಂತಕರಾಗಿದ್ದ ದಿ. ಅಗ್ರಾಳ ಪುರಂದರ ರೈ ಅವರನ್ನು ಸ್ಮರಿಸುವ ಹಿನ್ನೆಲೆಯಲ್ಲಿ ಆ.31ರಂದು ‘ಅಗ್ರಾಳ ಪುರಂದರ ರೈ ನೂರರ ನೆನಪು’ ಕಾರ್ಯಕ್ರಮ ನಗರದ ಮಂಗಳೂರು ವಿವಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪುರಂದರ ರೈಯವರ ಪುತ್ರ, ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಗ್ರಾಳ ಪುರಂದರ ರೈಯವರ ಮಕ್ಕಳು ಹಾಗೂ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಅಪರಾಹ್ನ 3:30ಕ್ಕೆ ಕಾರ್ಯಕ್ರಮ ಆರಂಭಗೊಳ್ಳ ಲಿದ್ದು, ಹಿರಿಯ ಸಾಹಿತಿ ಏರ್ಯ ಲಕ್ಷ್ಮಿನಾರಾಯಣ ಆಳ್ವ ಕಾರ್ಯಕ್ರಮ ಉದ್ಘಾಟಿಸುವರು ಎಂದರು. ಗ್ರಾಮೀಣ ಪತ್ರಕರ್ತ ಪ್ರಶಸ್ತಿ: ಪುರಂದರ ರೈ ಹೆಸರಿನಲ್ಲಿ ‘ಅಗ್ರಾಳ ಪುರಂದರ ರೈ ಗ್ರಾಮೀಣ ಪತ್ರಕರ್ತ ಪ್ರಶಸ್ತಿ’ ನೀಡಲು ಉದ್ದೇಶಿಸಿದ್ದು, ಈ ಬಾರಿ ಉಪ್ಪಿನಂಗಡಿಯ ಗ್ರಾಮೀಣ ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿಗೆ ಅಂದು ಸಂಜೆ 4:30ಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಂಜೆ 5ರಿಂದ ಕೃಷಿಚಿಂತನ ನಡೆಸಲಾಗುವುದು. ಸಭಿಕರಿಗೆ ದೇಸೀ ಹಣ್ಣಿನ ಸಸಿಯನ್ನು ಉಚಿತವಾಗಿ ವಿತರಣೆ ಮಾಡಲಾಗುವುದು. 5:45ರಿಂದ ‘ಕಿಟ್ಣರಾಜಿ ಪರ್ಸಂಗೊ’ ತುಳು ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದು ಪ್ರೊ. ಬಿ.ಎ.ವಿವೇಕ ರೈ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಮನೋಹರ ಪ್ರಸಾದ್, ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಬಿ.ಎಂ.ಉಲ್ಲಾಸ್ ರೈ ಉಪಸ್ಥಿತರಿದ್ದರು.