ಮರಳು ಮಾಫಿಯಾ ವಿರುದ್ಧ ಕ್ರಮ: ಡಿಸಿ
ಕಾಸರಗೋಡು, ಆ.26: ಮರಳು ಮಾಫಿಯಾ ಮಟ್ಟ ಹಾಕಲು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಕಾರಿ ಜೀವನ್ ಬಾಬು ಕೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗಡಿ ಪ್ರದೇಶವಾದುದರಿಂದ ಹೊರ ರಾಜ್ಯದಿಂದ ಹೇರಳವಾಗಿ ಅಕ್ರಮ ಮರಳು ಸಾಗಾಟವಾಗುತ್ತಿದೆ. ಜಿಲ್ಲೆಯಲ್ಲಿ ಮರಳು ಲಭ್ಯತೆ ಕೊರತೆ ಇರುವುದು ಇದಕ್ಕೆ ಕಾರಣ ಎಂದ ಅವರು, ಗಡಿ ಪ್ರದೇಶದ ತಲಪಾಡಿ ತನಕ ರಸ್ತೆ ಚತುಷ್ಪಥ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ಕೇರಳ ಪ್ರವೇಶಿಸಿದಾಗ ಕಿರಿದಾದ ರಸ್ತೆ ಸಂಚಾರಕ್ಕೆ ತೊಡಕು ಉಂಟುಮಾಡುತ್ತಿದೆ. ಹಾಗಾಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಅನಿವಾರ್ಯವಾಗಿದೆ ಎಂದರು.
ಭೂರಹಿತರಿಗೆ ವಿತರಿಸಿದ ಭೂಮಿ ಬಳಕೆಗೆ ಅನುಕೂಲವಲ್ಲ ಎಂದು ಕಂಡು ಬಂದಲ್ಲಿ ಈ ಬಗ್ಗೆ ಮರು ಪರಿಶೀಲಿಸಲಾಗುವುದು. ಸ್ಥಳದ ಕೊರತೆ ಹಾಗೂ ಕೆಲವು ತಾಂತ್ರಿಕ ಸಮಸ್ಯೆಗಳು ಜಿಲ್ಲೆಯಲ್ಲಿ ಉದ್ಯಮ ಸ್ಥಾಪನೆಗೆ ಅಡ್ಡಿಯಾಗುತ್ತಿದೆ ಎಂದ ಅವರು, ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ ನೌಕರರು ಅವಗಿಂತ ಮೊದಲೇ ತೆರಳುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿದೆ. ಈ ಬಗ್ಗೆ ನಿಗಾವಹಿಸಲಾಗುವುದು ಎಂದರು.