78ರ ಹರೆಯದಲ್ಲೂ ‘ಗಣೇಶ’ ವಿಗ್ರಹ ರಚನೆ!
ಗಣಪನೇ ನನ್ನ ಕಲಾ ಗುರು!
‘‘ನನಗೆ ಈ ಕಲೆಯನ್ನು ಯಾರೂ ಕಲಿಸಿಲ್ಲ. ಶಾಲೆಗೆ ಹೋಗುತ್ತಿದ್ದಾಗ ವಿದ್ಯೆ ಅಷ್ಟಾಗಿ ತಲೆಗೆ ಹತ್ತುತ್ತಿರಲಿಲ್ಲ. ಹಾಗಾಗಿ ಶಾಲೆಗೆ ಮಣ್ಣನ್ನು ಕೊಂಡೊಯ್ದು, ಶಿಕ್ಷಕಿಯ ಕಣ್ತಪ್ಪಿಸಿ ಮೂರ್ತಿ ಮಾಡಲು ಪ್ರಯತ್ನಿಸಿದರೂ, ಶಿಕ್ಷಕಿಯ ಕೈಗೆ ಸಿಕ್ಕಿಬಿದ್ದು ಅವರಿಂದ ಹೊಡೆಸಿಕೊಳ್ಳುತ್ತಿದ್ದೆ. ನನಗೆ 20 ವರ್ಷವಾಗುತ್ತಲೇ ನಾನಾಗಿಯೇ ಆವೆಮಣ್ಣಿನಿಂದ ಮೂರ್ತಿಗಳನ್ನು ತಯಾರಿಸಲು ಆರಂಭಿಸಿದೆ. ಅಂದಿನಿಂದ ಈವರೆಗೂ 2014ರಿಂದ ಎರಡು ವರ್ಷಗಳನ್ನು ಹೊರತುಪಡಿಸಿ ಪ್ರತಿ ವರ್ಷ ಮೂರ್ತಿಯನ್ನು ತಯಾರಿಸುತ್ತೇನೆ. ಗಣಪ ಎಂದರೆ ನನಗಿಷ್ಟ. ಹಾಗಾಗಿ ಅವನೇ ನನ್ನ ಕಲೆಗೆ ಗುರು. ಅವನನ್ನು ನೆನೆಪಿಸಿಕೊಂಡೇ ನಾನು ಮೂರ್ತಿಗಳನ್ನು ತಯಾರಿಸುತ್ತೇನೆ’’
-ಗಣಪತಿ ವಿಗ್ರಹ ತಯಾರಕ ದಾಮೋದರ ಶೆಣೈ.
ಮಂಗಳೂರು, ಆ.26: ಗಣೇಶನೆಂದರೆ ಇವರಿಗೆ ತುಂಬಾ ಇಷ್ಟ. ಹಾಗಾಗಿಯೇ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅತ್ತ ಪಾಠವಾಗುತ್ತಿದ್ದಂತೆಯೇ ಕದ್ದು ಮುಚ್ಚಿ ಮಣ್ಣಿನಿಂದ ಗಣೇಶನ ಮೂರ್ತಿ ಮಾಡಲು ಯತ್ನಿಸಿ ಶಿಕ್ಷಕಿಯಿಂದ ಪೆಟ್ಟು ತಿಂದಿದ್ದ, ಇವರಿಂದು ತನ್ನ 78ರ ಹರೆಯದಲ್ಲೂ ಗಣೇಶನ ವಿಗ್ರಹ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ.
ಇವರ ಹೆಸರು ದಾಮೋದರ ಶೆಣೈ. ನಗರದ ಕಾರ್‌ಸ್ಟ್ರೀಟ್‌ನ ವೆಂಕಟರಮಣ ದೇವಸ್ಥಾನದ ಪಕ್ಕದ ಓಣಿಯೊಂದರಲ್ಲಿ ಸುಮಾರು 57 ವರ್ಷಗಳಿಂದ ಗಣಪನ ವಿಗ್ರಹಗಳನ್ನು ಇವರು ತಯಾರಿಸುತ್ತಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಮೊಣಕಾಲಿನ ಗಂಟು ನೋವಿನಿಂದಾಗಿ ಕುಳಿತುಕೊಳ್ಳಲಾಗದೆ, ವಿಗ್ರಹ ಮಾಡಲಾಗದೆ ಚಡಪಡಿಸಿದ್ದ ಇವರು ಈ ವರ್ಷ ಮತ್ತೆ ತಮ್ಮ ಕಲಾ ಪ್ರೀತಿಯನ್ನು ಮುಂದುವರಿಸಿದ್ದಾರೆ. ಗಣೇಶ ಚತುರ್ಥಿಗೆ ಸುಮಾರು ಐದು ತಿಂಗಳು ಮುಂಚಿತವಾಗಿ ಗಣಪನ ವಿಗ್ರಹಗಳನ್ನು ತಯಾರಿಸಲು ಆರಂಭಿಸುವ ಇವರು ಕಿರಿದಾದ, ಮಧ್ಯಮ ಹಾಗೂ ಸಾಧಾರಣ ಗಾತ್ರದ ವಿಗ್ರಹಗಳನ್ನು ತಯಾರಿಸುತ್ತಾರೆ.
ಆವೆ ಮಣ್ಣನ್ನೇ ತಮ್ಮ ಗಣಪ ವಿಗ್ರಹಗಳಿಗೆ ಉಪಯೋಗಿಸುವ ಇವರು ಯಾವುದೇ ಕಾರಣಕ್ಕೂ ವೌಲ್ಡಿಂಗ್ ಅಥವಾ ಕಬ್ಬಿಣದ ಸರಳುಗಳನ್ನು ಉಪಯೋಗಿಸದೆ ತಮ್ಮ ಕೈಯಲ್ಲೇ ಆವೆ ಮಣ್ಣನ್ನು ಹದಗೊಳಿಸಿ ನಾಜೂಕಾಗಿ ಗಣಪನ ವಿಗ್ರಹಗಳನ್ನು ತಯಾರಿಸುತ್ತಾರೆ. ಕಿವಿ, ಮೂಗು, ಕೈ ಸೇರಿದಂತೆ, ಸಣ್ಣ ಪುಟ್ಟ ಆಕಾರ,ವಿನ್ಯಾಸಗಳಿಗೂ ಹೆಚ್ಚಿನ ಮಹತ್ವ ನೀಡುವ ಇವರು, ಈ ಇಳಿ ವಯಸ್ಸಿನಲ್ಲೂ ತಾವು ತಯಾರಿಸುವ ವಿಗ್ರಹಗಳ ಪ್ರತಿ ಅಂಚು ಕೂಡಾ ಒಪ್ಪವಾಗಿರುವುದಕ್ಕೆ ಗಮನ ಹರಿಸುತ್ತಾರೆ. ‘‘ಗಣೇಶ ಚತುರ್ಥಿಗೆ ಸುಮಾರು 5 ತಿಂಗಳು ಮುಂಚಿತವಾಗಿ ನಾನು ವಿಗ್ರಹ ತಯಾರಿಸಲು ಆರಂಭಿಸುತ್ತೇನೆ. ಹಿಂದೆಲ್ಲಾ ಎರಡು ಮೂರಡಿ ಎತ್ತರದ ಏಳೆಂಟು ವಿಗ್ರಹಗಳನ್ನು ಮಾಡುತ್ತಿದ್ದೆ. ಈಗ ಅದು ತ್ರಾಸದಾಯಕ. ಹಾಗಾಗಿ ಈ ಬಾರಿ ಒಂದು ಮಾತ್ರ ಮಾಡಿದ್ದೇನೆ. ಉಳಿದ ಸುಮಾರು 50ರಷ್ಟು ಸಣ್ಣ ಗಾತ್ರದ ಗಣಪತಿಗಳು. ಬೇಡಿಕೆ ತುಂಬಾ ಇದೆ. ಆದರೆ, ವಯಸ್ಸಾಯಿತಲ್ಲ. ಹೆಚ್ಚು ಮೂರ್ತಿ ತಯಾರಿಸಲು ಆಗುವುದಿಲ್ಲ’’ ಎನ್ನುತ್ತಾರೆ ದಾಮೋದರ್ ಶೆಣೈ.
‘‘ನನ್ನ ಮಕ್ಕಳಾರೂ ಇದನ್ನು ಕಲಿಯುವ ಆಸಕ್ತಿ ತೋರಿಸಿಲ್ಲ. ಆದರೆ, ನನ್ನ ಮಗಳ ಮಗ 14 ವರ್ಷದ ವರುಣ್ ಆಸಕ್ತಿ ತೋರಿಸಿ ಕಲಿಯುತ್ತಿದ್ದಾನೆ. ನನ್ನಿಂದ ಇಬ್ಬರು ಈ ವಿಗ್ರಹ ತಯಾರಿಯನ್ನು ಕಲಿತಿದ್ದಾರೆ. ಪೂ. 11 ಗಂಟೆಯ ವೇಳೆಗೆ ಮಣ್ಣಗುಡ್ಡದಲ್ಲಿರುವ ಮನೆಯಿಂದ ಇಲ್ಲಿಗೆ ಬರುತ್ತೇನೆ. ರಾತ್ರಿ ಸುಮಾರು 8 ಗಂಟೆಯವರೆಗೆ ಇಲ್ಲಿದ್ದು, ಗಣಪತಿ ತಯಾರಿಸುತ್ತೇನೆ. ಯಾವುದೇ ರೀತಿಯ ವೌಲ್ಡಿಂಗ್ ಹಾಗೂ ಕಬ್ಬಿಣದ ಸರಳನ್ನು ನಾನು ಉಪಯೋಗಿಸುವುದಿಲ್ಲ. ಸಾಂಪ್ರದಾಯಿಕ ಶೈಲಿ, ಪ್ರಾಕೃತಿಕ ಬಣ್ಣಕ್ಕೆ ಒತ್ತು ನೀಡಿ ಗಣಪನ ಮೂರ್ತಿ ತಯಾರಿಸುವುದರಿಂದ ಬಹಳಷ್ಟು ಬೇಡಿಕೆ ಇದೆ’’ ಎನ್ನುತ್ತಾರೆ, ಶೆಣೈ.
ಆವೆ ಮಣ್ಣಿನದೇ ಸಮಸ್ಯೆ!
ಹಿಂದೆಲ್ಲಾ ಆವೆಮಣ್ಣು ಇಲ್ಲಿನ ಹೆಂಚಿನ ಕಾರ್ಖಾನೆಗಳಿಂದ ಸುಲಭವಾಗಿ ಸಿಗುತ್ತಿತ್ತು. ಈಗ ನಗರದಲ್ಲಿನ ಬಹುತೇಕ ಕಾರ್ಖಾನೆಗಳು ಮುಚ್ಚಿ ಹೋಗಿವೆ. ಬೋಳಾರದ ಕಾರ್ಖಾನೆಯೊಂದರಲ್ಲಿ ಮಾತ್ರ ಸಿಗುತ್ತಿದೆ. ಅಲ್ಲಿಂದ ತರುತ್ತಿದ್ದೇನೆ. ಮಣ್ಣಿನ ಜತೆ ಹತ್ತಿಯನ್ನು ಉಪಯೋಗಿಸುತ್ತೇನೆ. ಕೈಯ್ಯಲೇ ವಿಗ್ರಹದ ಆಕೃತಿಗಳನ್ನು ತಯಾರಿಸಿ ಅದನ್ನು ಕೈಯ್ಯಲ್ಲೇ ವೌಲ್ಡ್ ಮಾಡುತ್ತೇನೆ. ಒಂದು ವಿಗ್ರಹ ತಯಾರಿಗೆ ನಾಲ್ಕೆದು ದಿನಗಳಾದರೂ ಬೇಕು. ಬಣ್ಣವೂ ಅಷ್ಟೆ, ಎನಾಮಲ್ ಪೇಯಿಂಟ್ ಬಳಕೆ ಮಾಡುತ್ತೇನೆ. ಆದರೆ ಬಹುತೇಕರು ಪೇಯಿಂಟ್ ಬೇಡ, ಸಾಂಪ್ರದಾಯಿಕವಾಗಿಯೇ, ಬಣ್ಣ ರಹಿತವಾಗಿರಲಿ ಎನ್ನುತ್ತಾರೆ. ಅದಕ್ಕಾಗಿ ಅದೇ ರೀತಿ ತಯಾರಿಸಿ ಕೊಡುತ್ತೇನೆ’’ ಎಂದು ಅವರು ಹೇಳುತ್ತಾರೆ.