ಉಡುಪಿ: ನೇತ್ರದಾನ ಅರಿವು ಜಾಥಾಕ್ಕೆ ಚಾಲನೆ
ಉಡುಪಿ, ಆ.26: ನೇತ್ರದಾನದಲ್ಲಿ ಉಡುಪಿ ಜಿಲ್ಲೆಯನ್ನು ದೇಶದಲ್ಲೇ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯುವ ಗುರಿ ಹೊಂದಲು ವಿದ್ಯಾರ್ಥಿಗಳು ಪಣತೊಡಬೇಕು. ಸ್ವಯಂಪ್ರೇರಿತರಾಗಿ ನೇತ್ರದಾನ ಮಾಡುವುದರಿಂದ ಇತರ ದೇಶಗಳಿಂದ ಕಣ್ಣನ್ನು ಆಮದು ಮಾಡುವುದನ್ನು ಕಡಿಮೆ ಮಾಡಬಹುದಾಗಿದೆ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದ್ದಾರೆ.
ಉಡುಪಿ ಪ್ರಸಾದ್ ನೇತ್ರಾಲಯದ ಆಶ್ರಯದಲ್ಲಿ ರೆಡ್‌ಕ್ರಾಸ್ ಸೊಸೈಟಿ, ನೇತ್ರಜ್ಯೋತಿ ರೆಡ್‌ಕ್ರಾಸ್ ಐ ಬ್ಯಾಂಕ್, ರೋಟರಿ ಅಂತಾರಾಷ್ಟ್ರೀಯ ವಲಯ, ಅದಾನಿ ಉಡುಪಿ ಪವರ್ ಕಾರ್ಪೊರೇಶನ್, ಐಎಂಎ ಉಡುಪಿ ಕರಾವಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ, ಉಡುಪಿ ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಸೌತ್ ಕೆನರಾ ಫೋಟೊಗ್ರಾಫಿಕ್ ಅಸೋಸಿಯೇಶನ್ ಉಡುಪಿ ವಲಯದ ಸಹಯೋಗದೊಂದಿಗೆ ನೇತ್ರದಾನ ಪಾಕ್ಷಿಕ ಆಚರಣೆಯ ಅಂಗವಾಗಿ ಶುಕ್ರವಾರ ಹಮ್ಮಿಕೊಳ್ಳಲಾದ ನೇತ್ರದಾನ ಅರಿವು ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಉಡುಪಿ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್‌ನ ನಿಕಟಪೂರ್ವ ಅಧ್ಯಕ್ಷ ಮುಹಮ್ಮದ್ ವೌಲಾ ನೇತ್ರದಾನ ಮಾಡಿರುವುದನ್ನು ಘೋಷಿಸಿದರು.
ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಎಂ.ಎ. ಗಫೂರ್, ರೆಡ್‌ಕ್ರಾಸ್ ಸೊಸೈಟಿ ಉಡುಪಿ ಸಭಾಪತಿ ಡಾ.ಉಮೇಶ್ ಪ್ರಭು, ಯುಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಐಎಂಎ ಕಾರ್ಯದರ್ಶಿ ಡಾ.ವಾಸುದೇವ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಯಕರ ಸುವರ್ಣ, ಜಿಲ್ಲಾ ಅಂಧತ್ವ ನಿವಾರಣಾ ಅಧಿಕಾರಿ ಡಾ.ನಿತ್ಯಾನಂದ ನಾಯಕ್, ಎಸ್‌ಕೆ ಪಿಎ ಅಧ್ಯಕ್ಷ ವಾಮನ್ ಪಡುಕೆರೆ, ಬ್ಲೋಸಂ ಫೆರ್ನಾಂಡಿಸ್ ಭಾಗವಹಿಸಿದ್ದರು.