×
Ad

ಸಾವಿಗೆ ಕಾರಣವಾದ ನಿರ್ಲಕ್ಷ್ಯದ ಚಾಲನೆಗೆ 2 ವರ್ಷ ಜೈಲು ಸಾಲದು: ಸುಪ್ರೀಂಕೋರ್ಟ್

Update: 2016-08-27 08:36 IST

ಹೊಸದಿಲ್ಲಿ, ಆ.27: ದೇಶದ ರಸ್ತೆಗಳಲ್ಲಿ ನಿರ್ಲಕ್ಷ್ಯದ ಮತ್ತು ಅತಿವೇಗದ ಚಾಲನೆಯಿಂದ ಪ್ರತಿದಿನ 400 ಮಂದಿ ಬಲಿಯಾಗುತ್ತಿದ್ದಾರೆ ಎಂಬ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್, ಈ ಅಪರಾಧಕ್ಕೆ ಹಾಲಿ ಇರುವ ಎರಡು ವರ್ಷಗಳ ಜೈಲು ಶಿಕ್ಷೆ ಏನೇನೂ ಸಾಲದು ಎಂದು ಅಭಿಪ್ರಾಯಪಟ್ಟಿದೆ.

ಈ ದಂಡನೆ, ಅಪರಾಧ ನಿರೋಧಕವಾಗುವಲ್ಲಿ ವಿಫಲವಾಗಿದ್ದು, ಈ ಸಂಬಂಧ ಕಾನೂನುಗಳನ್ನು ಬದಲಿಸದಿರುವ ಬಗ್ಗೆ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿ ಸಿ.ನಂಜಪ್ಪ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠ, ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಪಾದಚಾರಿಗಳ ಜೀವಕ್ಕೆ ಮತ್ತು ಇತರ ಚಾಲಕರ ಜೀವಕ್ಕೆ ಅಪಾಯ ಒಡ್ಡುತ್ತಿರುವ ಇಂಥ ಚಾಲಕರಲ್ಲಿ ಕಾನೂನು ಭೀತಿಯನ್ನು ತುಂಬಲು ಇದು ಸಕಾಲ. ಈ ಹಿನ್ನೆಲೆಯಲ್ಲಿ ನೀತಿ ನಿರೂಪಕರು ಭಾರತೀಯ ದಂಡಸಂಹಿತೆಯ 304 ಎ ಸೆಕ್ಷನ್‌ಗೆ ಅಗತ್ಯ ತಿದ್ದುಪಡಿ ತಂದು, ನಿರ್ಲಕ್ಷ್ಯ ಹಾಗೂ ಅತಿವೇಗದ ಚಾಲನೆಯ ಅಪರಾಧಕ್ಕೆ ಹೆಚ್ಚಿನ ಶಿಕ್ಷೆ ನಿಗದಿಪಡಿಸಬೇಕು ಎಂದು ಸೂಚಿಸಿದೆ.

"ತಾವೇ ರಾಜರು ಎಂದು ಅವರು ಭಾವಿಸಿದಂತಿದೆ. ಮದ್ಯಪಾನ ಮಾಡಿ ಚಾಲನೆ ಮಾಡುವುದು ನಿರ್ಲಕ್ಷ್ಯದ ಚಾಲನೆಗೆ ಮುಖ್ಯ ಕಾರಣ. ಇದಕ್ಕೆ ಇತರ ಮಂದಿ ಬಲಿಯಾಗುತ್ತಿದ್ದಾರೆ. ನಮ್ಮ ಜೀವ ಸುರಕ್ಷಿತವಲ್ಲ ಎಂಬ ಭಾವನೆ ಬಡವರಲ್ಲಿ ಬರುತ್ತಿದೆ. ಪಾದಚಾರಿಗಳಲ್ಲಿ ಅನಿಶ್ಚಿತತೆ ಉದ್ಭವಿಸಿದ್ದು, ಸಭ್ಯ ಚಾಲಕರು ಕೂಡಾ ಭೀತಿಯಿಂದ ಚಾಲನೆ ಮಾಡುವ ಪರಿಸ್ಥಿತಿ ಬಂದಿದೆ" ಎಂದು ನ್ಯಾಯಪೀಠ ಬಣ್ಣಿಸಿದೆ.

ಹೆಚ್ಚುವರಿ ಸಾಲಿಸಿಟರ್ ಜನರಲ್ ಮಹೇಂದ್ರ ಸಿಂಗ್ ಅವರು, ಈ ಸಂಬಂಧ ಕೇಂದ್ರದ ಅಭಿಪ್ರಾಯವನ್ನು ಮುಂದಿನ ವಿಚಾರಣೆ ವೇಳೆ ತಿಳಿಸುವುದಾಗಿ ಪೀಠಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News