ತರಗತಿ ಬಹಿಷ್ಕರಿಸಿ ಸಿಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

Update: 2016-08-27 12:46 GMT

ಬಂಟ್ವಾಳ, ಆ. 27: ವಳಚ್ಚಿಲ್ ಪದವಿನ ಶ್ರೀನಿವಾಸ್ ಬಿ ಫಾರ್ಮಾ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿರವಸ್ತ್ರ ಧರಿಸಲು ಅನುಮತಿ ನೀಡದಿರುವುದು, ವಿದ್ಯಾರ್ಥಿಗಳಿಗೆ ಶುಕ್ರವಾರದ ನಮಾಝ್‌ಗೆ ಅಡ್ಡಿಯಾಗುವಂತೆ ತರಗತಿ ವೇಳಾಪಟ್ಟಿ ರಚಿಸಿರುವುದು ಹಾಗೂ ಸಣ್ಣ ಪುಟ್ಟ ವಿಚಾರಗಳಿಗೆ ಸಾವಿರಾರು ರೂಪಾಯಿ ದಂಡ ವಿಧಿಸುವ ಕ್ರಮಗಳನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ನೇತೃತ್ವದಲ್ಲಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಕಾಲೇಜಿನ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಬೆಳಗ್ಗೆ 9 ಗಂಟೆಗೆ ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು ಕಾಲೇಜಿನ ಧೋರಣೆಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಶಾಲಾ-ಕಾಲೇಜುಗಳಲ್ಲಿ ಎಲ್ಲ ಜಾತಿ, ಧರ್ಮದ ವಿದ್ಯಾರ್ಥಿಗಳು ಕಲಿಯುತ್ತಿದ್ದು ಅವರವರ ಧರ್ಮದ ಆಚಾರ ವಿಚಾರಗಳನ್ನು ಅನುಸರಿಸಲು ದೇಶದ ಸಂವಿಧಾನ ಅವಕಾಶ ನೀಡಿದೆ. ಶ್ರೀನಿವಾಸ್ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಶಬರಾಯ ಮತ್ತು ಸಹ ಶಿಕ್ಷಕ ಜಿ.ವಿ.ಎಸ್.ಸುಬ್ರಹ್ಮಣ್ಯ ಮುಸ್ಲಿಂ ವಿದ್ಯಾರ್ಥಿನಿಯರ ಶಿರವಸ್ತ್ರ ವಿಚಾರದಲ್ಲಿ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ. ಶಿರವಸ್ತ್ರ ಧರಿಸುವ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತುಗೊಳಿಸುವ ಬೆದರಿಕೆ ಒಡ್ಡುತ್ತಿದ್ದಾರಲ್ಲದೆ, ಬಲವಂತವಾಗಿ ಶಿರವಸ್ತ್ರ ತೆಗೆಸಿ ವಿದ್ಯಾರ್ಥಿನಿಯರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಶ್ರೀನಿವಾಸ್ ಬಿ.ಫಾರ್ಮಾ ಕಾಲೇಜಿನಲ್ಲಿ ಬೈಲಾವೊಂದನ್ನು ಸಿದ್ಧಪಡಿಸಿ ವಿದ್ಯಾರ್ಥಿನಿಯರಿಗೆ ಶಿರವಸ್ತ್ರವನ್ನು ನಿರ್ಬಂಧಿಸಲಾಗಿದೆ. ಶಿರವಸ್ತ್ರ ವಿಚಾರಕ್ಕೆ ಸಂಬಂಧಿಸಿ ಶುಕ್ರವಾರ ಬಿ ಫಾರ್ಮಸಿಯ ವಿದ್ಯಾರ್ಥಿನಿಯೋರ್ವಳನ್ನು ತನ್ನ ಕೊಠಡಿಗೆ ಕರೆಸಿರುವ ಪ್ರಾಂಶುಪಾಲ ಹಾಗೂ ಸಹ ಶಿಕ್ಷಕರು ನಾಳೆಯಿಂದ ಶಿರವಸ್ತ್ರ ಧರಿಸಿ ತಗರತಿಗೆ ಹಾಜರಾದಲ್ಲಿ ಕಾಲೇಜಿನಿಂದ ಹೊರ ಹಾಕುವುದಲ್ಲದೆ ಫಲಿತಾಂಶವನ್ನು ತಡೆ ಹಿಡಿಯುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಕಾರರು ಕೂಡಲೇ ಶಿರವಸ್ತ್ರ ನಿರ್ಬಂಧಿಸಿ ಸಿದ್ಧಪಡಿಸಿರುವ ಬೈಲಾವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಇಂಜಿನಿಯರಿಂಗ್ ಮತ್ತು ಫಾರ್ಮಸಿ ಕಾಲೇಜಿನಲ್ಲಿ ಶುಕ್ರವಾರದ ನಮಾಝಿಗೆ ಅಡ್ಡಿಯಾಗುವಂತೆ ತರಗತಿ ವೇಳಾವಟ್ಟಿಯನ್ನು ತಯಾರಿಸಿದೆ. ಈ ಮೂಲಕ ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಘಾಸಿ ಉಂಟುಮಾಡಲಾಗುತ್ತಿದೆ ಎಂದು ಆರೋಪಿಸಿದ ಪ್ರತಿಭಟನಕಾರರು ಶುಕ್ರವಾರ ತರಗತಿ ಬಹಿಷ್ಕರಿಸಿ ಮಸೀದಿಗೆ ತೆರಳಿದಲ್ಲಿ ಸಾವಿರಾರು ರೂಪಾಯಿ ದಂಡ ವಿಧಿಸಲಾಗುತ್ತದೆ. ಅಲ್ಲದೆ, ಸಣ್ಣ ಪುಟ್ಟ ವಿಚಾರಗಳಿಗೂ ವಿದ್ಯಾರ್ಥಿಗಳಿಂದ ಸಾವಿರಾರು ರೂಪಾಯಿ ದಂಡ ವಸೂಲಿ ಮಾಡಲಾಗುತ್ತಿದೆ. ಈ ಮೂಲಕ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಹ ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲಿಖಿತ ಭರವಸೆ:

ವಾರದೊಳಗೆ ಕಾಲೇಜು ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿ ನಿಮ್ಮ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು. ಇದೀಗ ಪ್ರತಿಭಟನೆ ಕೈ ಬಿಡುವಂತೆ ವಿದ್ಯಾರ್ಥಿಗಳ ಮನವೊಲಿಸಲು ಭದ್ರತಾ ನಿರತ ಪೊಲೀಸರು ಶತಾಯ ಗತಾಯ ಪ್ರಯತ್ನ ನಡೆಸಿದರು. ಆದರೆ ಪಟ್ಟು ಬಿಡದ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಪ್ರಾಂಶುಪಾಲರು ಸ್ಥಳಕ್ಕೆ ಬಂದು ತಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸುವವರೆಗೆ ಸ್ಥಳದಿಂದ ಕದಡುವುದಿಲ್ಲ ಎಂದು ಹಠ ಹಿಡಿದು ಸ್ಥಳದಲ್ಲೇ ಕುಳಿತರು.

ಪ್ರತಿಭಟನೆಯ ಕಾವು ಹೆಚ್ಚಾದಂತೆ ಪ್ರಾಂಶುಪಾಲರೊಂದಿಗೆ ಮಾತುಕತೆ ನಡೆಸಿದ ಪೊಲೀಸರು ಇಬ್ಬರು ಕ್ಯಾಂಪಸ್ ಫ್ರಂಟ್ ನಾಯಕರನ್ನು ಪ್ರಾಂಶುಪಾಲರ ಕೊಠಡಿಯೊಳಗೆ ಕರೆಸಿ ಸಭೆ ನಡೆಸಿದರು. ಸುದೀರ್ಘ ಚರ್ಚೆಯ ಬಳಿಕ ಸೋಮವಾರದಿಂದ ತರಗತಿಯೊಳಗೆ ವಿದ್ಯಾರ್ಥಿನಿಯರು ತರಗತಿಯೊಳಗೆ ಶಿರವಸ್ತ್ರ ಧರಿಸಲು ಅನುಮತಿ ನೀಡಲಾಗುವುದು. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಬಾರದು ಎಂದು ಭರವಸೆ ನೀಡಿದ ಪ್ರಾಂಶುಪಾಲ ಶಬರಾಯ, ವಿದ್ಯಾರ್ಥಿಗಳು ಶಾಲೆಯ ನಿಯಮಗಳನ್ನು ಉಲ್ಲಂಘಿಸಿದಾಗ 50ರಿಂದ 100 ರೂ. ದಂಡ ವಿಧಿಸಲಾಗುತ್ತದೆ. ನಿಯಮಗಳನ್ನು ಉಲ್ಲಂಘಿಸದ ವಿದ್ಯಾರ್ಥಿಗಳಿಗೆ ಈ ಸಮಸ್ಯೆ ಇರುವುದಿಲ್ಲ. ಶುಕ್ರವಾರ 12:30ರಿಂದ 1:30ರವರೆಗೆ ಲ್ಯಾಬ್ ತರಗತಿ ನಡೆಯುತ್ತಿದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ತರಗತಿಯನ್ನು ಬೇಗ ಮುಗಿಸಿ ಮಸೀದಿಗೆ ತೆರಳಬಹುದು ಎಂದರು.

ಈ ಸಂದಭರ್ದಲ್ಲಿ ಶಿರವಸ್ತ್ರ ನಿರ್ಬಂಧಿಸಿ ಸಿದ್ಧಪಡಿಸಿರುವ ಬೈಲಾವನ್ನು ರದ್ದು ಪಡಿಸುವಂತೆ ಸಿಎಫ್‌ಐ ನಾಯಕರು ಹಠ ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಂಶುಪಾಲ ಮುಂದಿನ 15 ದಿವಸದೊಳಗೆ ಆಡಳಿತ ಮಂಡಳಿ, ವಿದ್ಯಾರ್ಥಿ ನಾಯಕರ ಸಭೆ ಕರೆದು ಚರ್ಚಿಸಿ ಆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಲಿಖಿತ ಭರವಸೆ ನೀಡಿದರು. ಆ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಹಿಂಪಡೆದರು.

ಮಳೆಯಲ್ಲೂ ಮುಂದುವರಿದ ಪ್ರತಿಭಟನೆ

ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾಲೇಜಿನ ಗೇಟ್ ಎದುರು ಕುಳಿತು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಎರಡು ಬಾರಿ ಧಾರಾಕಾರ ಮಳೆ ಸುರಿದರೂ ಸ್ಥಳದಿಂದ ಕದಡದ ವಿದ್ಯಾರ್ಥಿಗಳು ಜೋರಾಗಿ ಘೋಷಣೆ ಕೂಗಲಾರಂಬಿಸಿದರು. ಮಳೆಯಲ್ಲಿ ಒದ್ದೆಯಾಗಿ ಪ್ರತಿಭಟನೆ ಮುಂದುವರಿಸಿದ ವಿದ್ಯಾರ್ಥಿಗಳನ್ನು ವೀಕ್ಷಿಸುತ್ತಿದ್ದ ಊರಿನ ನಾಗರಿಕರು ಕೂಡಾ ವಿದ್ಯಾರ್ಥಿಗಳ ಘೋಷಣೆಗೆ ಧ್ವನಿಗೂಡಿಸಿದರು.

ಪ್ರತಿಭಟನೆಯಲ್ಲಿ ಕ್ಯಾಂಪಸ್ ಫ್ರಂಟ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಥಾವುಲ್ಲಾ ಪುಂಜಾಲಕಟ್ಟೆ, ಜಿಲ್ಲಾ ಸಮಿತಿ ಸದಸ್ಯ ರಿಯಾಝ್ ಕಡಂಬು, ತ್ವಾಹ, ಮಂಗಳೂರು ತಾಲೂಕು ಅಧ್ಯಕ್ಷ ನಿಝಾಮ್, ಇಂಜಿನಿಯರಿಂಗ್ ಹಾಗೂ ಬಿ ಫಾರ್ಮಸಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದರು.

ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಸಿದ್ಧಪಡಿಸಿರುವ ಬೈಲಾದ ಪ್ರಕಾರ ತರಗತಿಯೊಳಗೆ ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸಲು ನಿರ್ಬಂಧಿಸಲಾಗಿತ್ತು. ಅದರಂತೆ ಶಿರವಸ್ತ್ರ ಧರಿಸಿದ ವಿದ್ಯಾರ್ಥಿನಿಯರಲ್ಲಿ ಶಿರವಸ್ತ್ರ ತೆಗೆಯುವಂತೆ ಶಿಕ್ಷಕರು ಸೂಚಿಸುತ್ತಿದ್ದರು. ಇದರ ವಿರುದ್ಧ ಇಂದು ಕಾಲೇಜಿನ ವಿದ್ಯಾರ್ಥಿಗಳು ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಕಾಲೇಜು ಎದುರು ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ತರಗತಿಯೊಳಗೆ ಶಿರವಸ್ತ್ರ ಧರಿಸಲು ಅನುಮತಿ ನೀಡಿದ್ದೇವೆ. ಆ ಬಗ್ಗೆ ಸಿದ್ಧಪಡಿಸಿರುವ ಬೈಲಾವನ್ನು ರದ್ದು ಪಡಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದ್ದು ಈ ಬಗ್ಗೆ ಆಡಳಿತ ಮಂಡಳಿಯವರಲ್ಲಿ ಚರ್ಚಿಸಿ ಅವರ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು.

- ಶಬರಾಯ, ಬಿ ಫಾರ್ಮಾ ಪ್ರಾಂಶುಪಾಲ. 

ರಾಜ್ಯದ ವಿವಿಧೆಡೆ ನಮ್ಮ ಸಂಸ್ಥೆಯ ಹಲವು ಕಾಲೇಜುಗಳಿದ್ದು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ನಮ್ಮ ಯಾವುದೇ ಕಾಲೇಜಿನಲ್ಲಿಲ್ಲದ ಸಮಸ್ಯೆಯೊಂದು ವಳಚ್ಚಿಲ್ ಪದವಿನ ಕಾಲೇಜಿನಲ್ಲಿ ಮಾತ್ರ ಸೃಷ್ಟಿಯಾಗಿದೆ. ಅದು ಕೂಡಾ ಈ ಕಾಲೇಜಿನಲ್ಲಿ ಮಾತ್ರ ಯಾಕೆ ಸೃಷ್ಟಿಯಾಯಿತು ಎಂಬುದು ನನಗೂ ಅರ್ಥವಾಗುತ್ತಿಲ್ಲ. ವಿದ್ಯಾರ್ಥಿಗಳ ಸಮಸ್ಯೆ ನನ್ನ ಗಮನಕ್ಕೆ ಇಂದು ತಿಳಿದು ಬಂದಿದ್ದು ಈ ಬಗ್ಗೆ ಕಾಲೇಜಿನ ಎಲ್ಲ ಪ್ರಾಂಶುಪಾಲರು, ಶಿಕ್ಷಕ ಸಭೆ ಕರೆದು ಚರ್ಚಿಸಲಾಗುವುದು. ಕಾಲೇಜಿನ ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗೆ ಯಾವುದೇ ಧಕ್ಕೆ ಬಾರದಂತೆ ಹಾಗೂ ಶೈಕ್ಷಣಿಕ ಬದುಕಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು.

- ಶ್ರೀನಿವಾಸ್ ರಾವ್, ಶ್ರೀನಿವಾಸ್ ಸಂಸ್ಥೆಯ ಉಪಾಧ್ಯಕ್ಷ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News