×
Ad

ಆಹ್ವಾನಿಸಿ ಅವಮಾನ ಮಾಡಿದ ಅಮೆರಿಕಕ್ಕೆ ತಿರುಗೇಟು ನೀಡಿದ ಬಿಜೆಪಿ ಸಂಸದ

Update: 2016-08-27 10:58 IST

ಅಮೆರಿಕ ರಾಯಭಾರವು ಭದ್ರತಾ ಕಾರಣಗಳಿಂದ ಪಗಡಿಯನ್ನು ತೆಗೆಯಲು ಹೇಳಿರುವುದಕ್ಕೆ ಸಿಟ್ಟಾಗಿ ಬಿಜೆಪಿ ಸಂಸದ ಅಮೆರಿಕದ ವೀಸಾ ನಿರಾಕರಿಸಿದ್ದಾರೆ. ಉತ್ತರ ಪ್ರದೇಶದ ಭರೋಹಿಯ ಸಂಸದ ವೀರೇಂದ್ರ ಸಿಂಗ್‌ರನ್ನು ಅಮೆರಿಕದ ರಾಯಭಾರ ಕಚೇರಿ ಮೊದಲಿಗೆ ಕೃಷಿ ಸಂಬಂಧಿ ವಿಷಯಗಳ ಬಗ್ಗೆ ಸಂದರ್ಶನ ನಡೆಸಿತ್ತು. ನಂತರ ಅವರನ್ನು ಅಮೆರಿಕಕ್ಕೆ ಭೇಟಿ ನೀಡಲು ಆಹ್ವಾನಿಸಿತ್ತು.

ಈ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಭೇಟಿ ನೀಡಲು ವೀಸಾ ಪಡೆಯಲೆಂದು ವೀರೇಂದ್ರ ಸಿಂಗ್ ರಾಯಭಾರ ಕಚೇರಿಗೆ ಹೋದಾಗ ಭದ್ರತಾ ಕಾರಣಗಳಿಂದ ಪಗಡಿಯನ್ನು ತೆಗೆಯುವಂತೆ ಹೇಳಲಾಗಿತ್ತು. ನಾನು ಪಗಡಿ ತೆಗೆಯಲಾರೆ. ರೈತನಾಗಿರುವ ನನಗೆ ಪಗಡಿ ಗೌರವದ ವಿಚಾರ. ದೇಶ ನನಗೆ ಕೊಟ್ಟ ಗೌರವವಿದು. ಭದ್ರತೆಗೆಂದು ಅದನ್ನು ನಿವಾರಿಸುವುದು ಹೇಗೆ? ನಾನು ಹಾಗೆ ಮಾಡಲಾರೆ. ತಮ್ಮ ದೇಶಕ್ಕೆ ಬರಲು ಅವರೇ ನನಗೆ ಆಹ್ವಾನ ನೀಡಿದ್ದರು. ಹೀಗಾಗಿ ನಾನು ವೀಸಾ ನಿರಾಕರಿಸಿ, ನನಗೆ ಆಸಕ್ತಿಯಿಲ್ಲ ಎಂದಿದ್ದೇನೆ ಎಂದು ಸಿಂಗ್ ಹೇಳಿದ್ದಾರೆ. ಸಂಸತ್ತಿನಲ್ಲಿ ಬಹುತೇಕ ಪಗಡಿ ತೊಟ್ಟುಕೊಂಡೇ ಕಾಣುವ ವೀರೇಂದ್ರ ಸಿಂಗ್ ಸಾಮಾನ್ಯವಾಗಿ ಗ್ರಾಮೀಣ ವಿಷಯಗಳು ಮತ್ತು ಕೃಷಿ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಈ ವಿಷಯವನ್ನು ಅಧಿಕೃತವಾಗಿ ತಮ್ಮ ಗಮನಕ್ಕೆ ತರಲಾಗಿಲ್ಲ, ಅಧಿಕೃತ ದೂರು ಬಂದಲ್ಲಿ ಅಮೆರಿಕದ ಅಧಿಕಾರಿಗಳ ಜೊತೆಗೆ ಮಾತನಾಡುವುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ. ವೀರೇಂದ್ರ ಸಿಂಗ್ ಕೂಡ ಈ ವಿಚಾರವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮುಂದೆ ಇಡುವ ಬಗ್ಗೆ ಯೋಚಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News