2018ರ ಚುನಾವಣೆಗೆ ಪಕ್ಷ ಸಂಘಟನೆಗೆ ಮಂಗಳೂರಿನಲ್ಲೇ ಚಾಲನೆ: ಡಾ. ಜಿ. ಪರಮೇಶ್ವರ್
ಮಂಗಳೂರು, ಆ.27: 2018ರಲ್ಲಿ ರಾಜ್ಯ ವಿಧಾನಸಬಾ ಚುನಾವಣೆ ನಡೆಯಲಿದ್ದು ಈ ನಿಟ್ಟಿನಲ್ಲಿ ಅ.2ರಿಂದ ರಾಜ್ಯಾದ್ಯಂತ ಸಮಾವೇಶ ನಡೆಸಲು ತೀರ್ಮಾನಿಸಿದ್ದು, ಮಂಗಳೂರಿನಿಂದಲೇ ಆರಂಭವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹೇಳಿದರು.
ಶುಕ್ರವಾರ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಅ.2ರಿಂದ ಬೂತ್, ಬ್ಲಾಕ್, ಪಂಚಾಯತ್, ವಾರ್ಡ್ ಮಟ್ಟದಲ್ಲಿ ಸಭೆ, ಸಮಾರಂಭ ಮಾಡಿ ಪಕ್ಷ ಸಂಘಟನೆ ಮಾಡಬೇಕಾಗಿದೆ. ಇಡೀ ರಾಜ್ಯದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಮಂಗಳೂರಿನಿಂದಲೇ ಚಾಲನೆ ಸಿಗಬೇಕಾಗಿದೆ ಎಂದರು.
ಮುಂಬರುವ ಚುನಾವಣೆಗೆ ಅಲ್ಪಾವಧಿ ಇರುವುದರಿಂದ ಪಕ್ಷದ ಪ್ರತಿಯೊಬ್ಬರು ಸಂಘಟಿತರಾಗಿ ಶ್ರಮಿಸುವ ಮೂಲಕ ಮತ್ತೆ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು. ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಪ್ರತಿಪಕ್ಷ ನಾಯಕರ ಟೀಕೆ ಟಿಪ್ಪಣಿಗಳಿಗೆ ಸಮಯ ಸಂದರ್ಭ ಬಂದಾಗ ಉತ್ತರ ನೀಡುತ್ತೇವೆ. ಅಧಿಕಾರದಲ್ಲಿದ್ದಾಗ ಪ್ರತಿಪಕ್ಷಗಳು ಟೀಕೆಗಳು ಮಾಡುತ್ತವೆ, ಅದಕ್ಕೆ ತಲೆಕೆಡಿಸಿಕೊಳ್ಳದೆ ಪಕ್ಷ ಸಂಘಟನೆ ಮಾಡೋಣ. 3 ವರ್ಷದಲ್ಲಿ ಕಾರ್ಯಕರ್ತರ ಬೇಡಿಕೆ ನಿರೀಕ್ಷಿತ ಪ್ರಮಾಣದಲ್ಲಿ ಮುಟ್ಟಲಾಗಿಲ್ಲ ಎಂಬುವುದು ನಮಗೂ ತಿಳಿದಿದೆ. ಇಲ್ಲಿ ಅಧಿಕಾರ ಮುಖ್ಯವಲ್ಲ, ಜಾತ್ಯತೀತ ಸಿದ್ಧಾಂತದಡಿ ಪಕ್ಷದ ಬದ್ಧತೆಯೊಂದಿಗೆ ಸಂಘಟಿತ ಹೋರಾಟ ಮಾಡೋಣ ಎಂದರು.