ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ
ಮಂಗಳೂರು, ಆ.27: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2015ನೆ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಗೌರವ ಪ್ರಶಸ್ತಿಗೆ ಬೆಂಗಳೂರಿನ ಡಾ. ಇಂದಿರಾ ಹೆಗ್ಡೆ (ತುಳು ಸಾಹಿತ್ಯ), ಕೋಟಿ ಪರವ (ತುಳು ಜಾನಪದ) ಹಾಗೂ ಬೇತ ಕುಂಞ ಕುಲಾಲ್ (ತುಳು ಯಕ್ಷಗಾನ) ಆಯ್ಕೆಯಾಗಿದ್ದಾರೆ.
ಉರ್ವಾಸ್ಟೋರ್‌ನ ತುಳುಭವದಲ್ಲಿ ಸುದ್ದಿಗೋಷ್ಠಿಯಲ್ಲಿಂದು ಪ್ರಶಸ್ತಿಯ ಮಾಹಿತಿ ನೀಡಿದ ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಪುಸ್ತಕ ಬಹುಮಾನಕ್ಕೆ ತುಳು ಕಥಾ ವಿಭಾಗದಲ್ಲಿ ವಸಂತಿ ಶೆಟ್ಟಿ ಬ್ರಹ್ಮಾವರ ಅವರ ‘ಗುತ್ತುದಿಲ್ಲದ ಜಾಲ್‌ಡ್’, ಕವನ ವಿಭಾಗದಲ್ಲಿ ಚೆನ್ನಪ್ಪ ಅಳಿಕೆಯವರ ‘ಬೂಳ್ಯ’ ಹಾಗೂ ನಾಟಕ ವಿಭಾಗದಲ್ಲಿ ಶಿಮಂತೂರು ಚಂದ್ರಹಾಸ ಸುವರ್ಣ ಅವರ ‘ಗಾಲ’ ಕೃತಿಗಳು ಆಯ್ಕೆಗೊಂಡಿವೆ ಎಂದು ತಿಳಿಸಿದರು.
ಪ್ರಶಸ್ತಿ ಪ್ರದಾನದ ದಿನಾಂಕ ಇನ್ನಷ್ಟೆ ನಿಗದಿಯಾಗಬೇಕಿದ್ದು, ಅಕ್ಟೋಬರ್ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಅವರು ಹೇಳಿದರು. ಗೌರವ ಪ್ರಶಸ್ತಿಯು ತಲಾ 50,000 ರೂ. ನಗದು, ಶಾಲು, ಹಾರ, ಫಲತಾಂಬೂಲ, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಪುಸ್ತಕ ಬಹುಮಾನವು ತಲಾ 25,000 ರೂ. ನಗದು, ಸ್ಮರಣಿಕೆ ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿರುತ್ತದೆ ಎಂದು ಅವರು ಹೇಳಿದರು.
8ನೆ ಪರಿಚ್ಚೇದಕ್ಕೆ ತುಳು ಸೇರ್ಪಡೆ: ಆ.31ರಂದು ಕೇಂದ್ರಕ್ಕೆ ನಿಯೋಗ
ತುಳು ಭಾಷೆಯನ್ನು ಭಾರತ ಸಂವಿಧಾನದ 8ನೆ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಹಾಗೂ ಕೇರಳ ತುಳು ಸಾಹಿತ್ಯ ಅಕಾಡೆಮಿಗಳ ಅಧ್ಯಕ್ಷರನ್ನೊಳಗೊಂಡ ನಿಯೋಗವು ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಆ.31ರಂದು ಕೇಂದ್ರದ ಗೃಹ ಸಚಿವರನ್ನು ಭೇಟಿ ಮಾಡಲಿದೆ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ತಿಳಿಸಿದರು.
ಭೇಟಿಯ ವೇಳೆ ತುಳು ಭಾಷೆಯನ್ನು 8ನೆ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಅಗತ್ಯದ ಕುರಿತು ವಿಸ್ತೃತವಾದ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು. ವಿಕಿ ಪೀಡಿಯಾ, ಶಾಲೆಗಳಲ್ಲಿ ಐಚ್ಛಿಕವಾಗಿ ತುಳು ಪಠ್ಯ ಬೋಧನೆ, ಭರತವಾಣಿ ಯೋಜನೆ ಕುರಿತಂತೆ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ. ನಿಯೋಗದಲ್ಲಿ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ವಾಮನ ನಂದಾವರ, ಉಮಾನಾಥ್ ಕೋಟ್ಯಾನ್, ಅಖಿಲ ಭಾರತ ತುಳು ಒಕ್ಕೂಟದ ಎಸಿ. ಭಂಡಾರಿ, ಸುರೇಂದ್ರ ಕುಮಾರ್ ಕೂಡಾ ಹೊಸದಿಲ್ಲಿಗೆ ತೆರಳಲಿದ್ದಾರೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ, ಸದಸ್ಯರಾದ ವೇದಾವತಿ, ಡಿ.ಎಂ. ಕುಲಾಲ್, ಕೆ.ಟಿ. ವಿಶ್ವನಾಥ, ರಘು ಇಡ್ಕಿದು, ಮೋಹನ್ ಕೊಪ್ಪಲ, ರೂಪಕಲಾ ಆಳ್ವ, ಜಯಶೀಲ ಉಪಸ್ಥಿತರಿದ್ದರು.