ಉಪ್ಪಿನಂಗಡಿ: ಬೈಕ್ ಸವಾರನ ಸಾವಿಗೆ ಕಾರಣನಾಗಿದ್ದ ಬಸ್ ಚಾಲಕನಿಗೆ ಜೈಲು ಶಿಕ್ಷೆ

Update: 2016-08-27 11:51 GMT

ಉಪ್ಪಿನಂಗಡಿ, ಆ.27: 3 ವರ್ಷದ ಹಿಂದೆ ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ಬಸ್ ಮತ್ತು ಬೈಕ್ ಢಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತ ಎಸಗಿರುವ ಬಸ್ ಚಾಲಕನನ್ನು ಅಪರಾಧಿ ಎಂದು ಘೋಷಿಸಿರುವ ಬೆಳ್ತಂಗಡಿ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಉರುವಾಲು ಗ್ರಾಮದ ಕರಾಯ ನಿವಾಸಿ ಅಬುಸಾಲಿ ಎಂಬಾತ ಜೈಲು ಶಿಕ್ಷೆಗೆ ಒಳಗಾಗಿರುವ ಬಸ್ ಚಾಲಕ. 2013ರ ಮೇ 17ರಂದು ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಯ ಕಲ್ಲೇರಿ ಬಂಡಸಾಲೆ ಎಂಬಲ್ಲಿ ವರುಣ್ ಹೆಸರಿನ ಬಸ್ (ಕೆಎ-21-ಪಿ-3777) ಬೈಕ್‌ಗೆ ಢಿಕ್ಕಿಯಾಗಿತ್ತು. ಬೈಕ್‌ನಲ್ಲಿದ್ದ ತಣ್ಣೀರುಪಂಥ ಗ್ರಾಮದ ಕುದ್ರಡ್ಕ ನಿವಾಸಿ ಶ್ರೀಧರ ಆಚಾರ್ಯ (35) ಎಂಬವರು ಗಂಭೀರ ಗಾಯಗೊಂಡು ಮೃತಪಟ್ಟಿದ್ದರು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಬೆಳ್ತಂಗಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿ, ಆರೋಪ, ಪ್ರತ್ಯಾರೋಪ ಆಲಿಸಿರುವ ಬೆಳ್ತಂಗಡಿ ಹಿರಿಯ ವಿಭಾಗ ಪ್ರಥಮ ದರ್ಜೆ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಜಿ. ರಾಘವೇಂದ್ರ, ಅಪರಾಧಿಗೆ ಅತಿವೇಗ ಹಾಗೂ ನಿರ್ಲಕ್ಷದ ಚಾಲನೆಗಾಗಿ 1 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದರೆ 2 ತಿಂಗಳು ಜೈಲು ಶಿಕ್ಷೆ, ತೀವ್ರ ತರದ ಗಾಯ ಉಂಟು ಮಾಡಿದ್ದಕ್ಕೆ 1 ಸಾವಿರ ರೂ. ದಂಡ, ದಂಡ ಕಟ್ಟದಿದ್ದಲ್ಲಿ 3 ತಿಂಗಳ ಶಿಕ್ಷೆ, ಅಪಘಾತದಿಂದಾಗಿ ಸಾವುಗೀಡಾಗಿದ್ದಕ್ಕೆ 6 ತಿಂಗಳು ಜೈಲು, ಇದರಲ್ಲಿ 4 ತಿಂಗಳು ಕಠಿಣ ಸಜೆ, 2 ತಿಂಗಳು ಸಾದಾ ಸಜೆ, ಮೋಟಾರು ವಾಹನ ಕಾಯ್ದೆಯಂತೆ ವಾಹನದ ವಿಮಾ ಪಾಲಿಸಿಯ ಅವಧಿ ಇತ್ಯಾದಿ ಮುಗಿದಿರುವ ಕಾರಣ ಹಾಗೂ ವಿವಿಧ ಕಲಮುಗಳ ಅಡಿಯಲ್ಲಿ 6 ಸಾವಿರ ದಂಡ, ಇದಕ್ಕೆ ವಿಫಲರಾದರೆ 5 ತಿಂಗಳು ಶಿಕ್ಷೆಯನ್ನು ಪ್ರಕಟಿಸಿದ್ದಾರೆ.

ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಕಿರಣ್ ಕುಮಾರ್ ವಾದ ಮಂಡಿಸಿದ್ದರು.

ಶ್ರೀಧರ ಆಚಾರ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News