ಉತ್ತರಪ್ರದೇಶ: ಮುಂದಿನ ತಿಂಗಳು ಕಾಂಗ್ರೆಸ್‌ನಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಿಸಾನ್‌ಯಾತ್ರಾ

Update: 2016-08-27 11:57 GMT

ಲಕ್ನೊ,ಆಗಸ್ಟ್ 27: ಉತ್ತರಪ್ರದೇಶದಲ್ಲಿ ಅಧಿಕಾರ ಹಿಡಿಯಬೇಕೆಂಬ ಶತಪ್ರಯತ್ನದಲ್ಲಿ ತೊಡಗಿರುವ ಕಾಂಗ್ರೆಸ್ ರಾಜ್ಯದ ರೈತರಿಗಾಗಿ ಧ್ವನಿಯೆತ್ತಲು ಮುಂದೆ ಬಂದಿದೆ. ಮುಂದಿನ ತಿಂಗಳು ರಾಹುಲ್‌ಗಾಂದಿ ನೇತೃತ್ವದಲ್ಲಿ ಉತ್ತರಪ್ರದೇಶದ ರೈತರಿಗಾಗಿ ಕಿಸಾನ್‌ಯಾತ್ರಾವನ್ನು ಕೈಗೊಳ್ಳಲಿದೆ ಎಂದು ವರದಿಯಾಗಿದೆ. ಉತ್ತರಪ್ರದೇಶದ ರಾಜಕೀಯದಲ್ಲಿ ತನ್ನ ವರ್ಚಸ್ಸನ್ನು ಮರಳಿ ಗಳಿಸಿಕೊಳ್ಳುವ ನಿಟ್ಟಿನಲ್ಲಿ ಅತ್ಯಂತ ಹಳೆಯ ರಾಜಕೀಯಪಕ್ಷ ಕಾಂಗ್ರೆಸ್ ಪಕ್ಷ ಈರೀತಿ ಯೋಜನಾಬದ್ಧವಾದ ಹೆಜ್ಜೆಗಳನ್ನು ಇಡುತ್ತಿದೆ.

    ಮುಂದಿನ ವರ್ಷದ ವಿಧಾನಸಭಾ ಚುನಾವಣೆಗಾಗಿ ನಡೆಸಲಾಗುತ್ತಿರುವ ಮಹಾ ಅಭಿಯಾನದ ಮೊದಲ ಚರಣದಲ್ಲಿ ದಿಲ್ಲಿಯಿಂದ ಕಾನ್ಪುರವರೆಗಿನ ನಡೆದ ಬಸ್‌ಯಾತ್ರೆಯ ಬಳಿಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯ ಲಕ್ನೊದ ರೋಡ್‌ಶೋ ಮತ್ತು ಎರಡನೆ ಚರಣದಲ್ಲಿ ವಾರಣಾಸಿಯಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯ ರೋಡ್ ಶೋ ಯಶಸ್ವಿಯಾಗಿದ್ದು, ಮೂರನೆ ಹಂತದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಶೀಲಾದೀಕ್ಷಿತ್ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್‌ಬಬ್ಬರ್ ನೇತೃತ್ವದಲ್ಲಿ ಬೇರೆಬೇರೆ ಯಾತ್ರೆಗಳ ಆಯೋಜನೆಯಲ್ಲಿ ಕಾಂಗ್ರೆಸ್ ವ್ಯಸ್ತವಾಗಿದೆ. ಇದೇ ಸರಣಿಯಲ್ಲಿ ಮುಂದುವರಿದು ಮುಂದಿನ ತಿಂಗಳ ಆರಂಭದಲ್ಲಿ ಕಿಸಾನ್‌ಯಾತ್ರಾ ಕೈಗೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಇಡೀ ಒಂದು ತಿಂಗಳು ಕಿಸಾನ್ ಯಾತ್ರೆ ಉತ್ತರಪ್ರದೇಶಾದ್ಯಂತ ಸಂಚರಿಸಲಿದ್ದು, ರೈತರ ಸಮಸ್ಯೆಗಳು, ಅವರ ಹಕ್ಕುಗಳು, ಅವರಧ್ವನಿಯನ್ನು ಈ ಮೂಲಕ ಇನ್ನಷ್ಟು ತೀವ್ರವಾಗಿ ಕಾಂಗ್ರೆಸ್ ಮಂಡಿಸಲಿದೆ. ರಾಹುಲ್‌ಗಾಂಧಿ ನೇತೃತ್ವದಲ್ಲಿ ಕಿಸಾನ್ ಯಾತ್ರಾ ಶುಭಾರಂಭಗೊಳ್ಳಲಿದ್ದು ಇದಕ್ಕೆ ಅಗತ್ಯವಿರುವ ಪೂರ್ವಭಾವಿ ಸಿದ್ಧತೆಯನ್ನು ರಾಜಕೀಯ ರಣನೀತಿಜ್ಞ ಪ್ರಶಾಂತ್ ಕಿಶೋರ್ ತಂಡ ನಡೆಸುತ್ತಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News