×
Ad

ಸಿಎಂಎಸ್ ಸಂಸ್ಥೆಯಿಂದ ಮಹಿಳಾ ಸಿಬ್ಬಂದಿಯ ಮೇಲೆ ದೌರ್ಜನ್ಯ ಆರೋಪ: ಆ.29ರಂದು ಪ್ರತಿಭಟನೆ

Update: 2016-08-27 17:30 IST

ಮಂಗಳೂರು, ಆ.27: ಸರಕಾರದ ಇ ಆಡಳಿತ ವ್ಯಾಪ್ತಿಗೊಳಪಡುವ ಮಂಗಳೂರು- ಒನ್ ಗುತ್ತಿಗೆ ಪಡೆದಿರುವ ಸಿಎಂಎಸ್ ಕಂಪ್ಯೂಟರ್ಸ್ ಸಂಸ್ಥೆಯ ಅಧಿಕಾರಿಗಳು ಮಹಿಳಾ ಸಿಬ್ಬಂದಿಯ ಮೇಲೆ ನಡೆಯುತ್ತಿರುವ ದೌರ್ಜನ್ಯ ವಿರೋಧಿಸಿ ಆ.29ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನೌಕರರ ಹಿತರಕ್ಷಣಾ ವೇದಿಕೆ ಸಲಹೆಗಾರ ಬಿ.ಎಸ್. ಚಂದ್ರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮಂಗಳೂರು ವನ್ ಮಹಿಳಾ ಸಿಬ್ಬಂದಿ ತಮಗೆ ಆಗುತ್ತಿರುವ ಕಿರುಕುಳದ ಬಗ್ಗೆ ಕದ್ರಿ ಠಾಣೆಯಲ್ಲಿ ದೂರು ನೀಡಿದ್ದು, ಅದಕ್ಕಾಗಿ ಏಳು ಸಿಬ್ಬಂದಿಯನ್ನು ಅಮಾನತು ಮಾಡುವ ಮೂಲಕ ಅಮಾನವೀಯವಾಗಿ ವರ್ತಿಸಲಾಗಿದೆ ಎಂದರು.

ಸಂಸ್ಥೆಯ ಈ ಕ್ರಮವನ್ನು ವಿರೋಧಿಸಿ ಕದ್ರಿಯ ಸಿಎಂಎಸ್ ಕೇಂದ್ರದ ಮುಂಭಾಗ ಪ್ರತಿಭಟನೆ ನಡೆಸಲಾಗುವುದು. ಕೇಂದ್ರದಲ್ಲಿ ಕಳೆದ 6- 7 ವರ್ಷಗಳಿಂದ ಕೆಲಸ ನಡೆಸುತ್ತಿದ್ದ ಸಿಬ್ಬಂದಿಗೆ ಲಿಖಿತ ಮಾಹಿತಿ ಒದಗಿಸದೆ ಮೌಖಿಕ ಆದೇಶ ನೀಡಿ ಕಿರುಕುಳ ನೀಡಲಾಗುತ್ತಿದೆ. ಮಹಿಳಾ ಸಿಬ್ಬಂದಿಗೆ ಮಾನಸಿಕ ಹಿಂಸೆ, ಸಾರ್ವಜನಿಕವಾಗಿ ಅವಮಾನ ಮಾಡಲಾಗುತ್ತಿದೆ. ಜಿಲ್ಲಾಡಳಿತ ತಕ್ಷಣ ಮಧ್ಯ ಪ್ರವೇಶಿಸಿ ಸಿಬ್ಬಂದಿಗೆ ನ್ಯಾಯ ಒದಗಿಸುವಂತೆ ಅವರು ಆಗ್ರಹಿಸಿದರು.

ಕಾರ್ಮಿಕರು, ಅವರ ಪರ ಕೆಲಸ ನಿರ್ವಹಿಸುತ್ತಿರುವ ಸಂಘಟನೆಗಳು ಪೊಲೀಸ್ ಠಾಣೆಗೆ ದೂರು ನೀಡಿದರೆ ಇದು ಕಾರ್ಮಿಕ ಇಲಾಖೆಯ ಕೆಲಸ ಎನ್ನುವ ಉತ್ತರ ದೊರೆತರೆ, ಕಾರ್ಮಿಕ ಇಲಾಖೆಗೆ ದೂರು ನೀಡಿದರೆ ಇದು ಪೊಲೀಸರ ಕೆಲಸ ಎಂದು ಪರಸ್ಪರ ಜವಾಬ್ದಾರಿ ವರ್ಗಾಯಿಸುವ ಸಬೂಬುಗಳು ದೊರೆಯುತ್ತವೆ. ಸಮಸ್ಯೆ ಪರಿಹಾರವಾಗುತ್ತಿಲ್ಲ ಎಂದವರು ಆಕ್ಷೇಪಿಸಿದರು.

ಸರ್ಕಾರದ ‘ಇ- ಆಡಳಿತ’ ವ್ಯವಸ್ಥೆ ವ್ಯಾಪ್ತಿಯಲ್ಲಿರುವ ಈ ಕೇಂದ್ರಗಳಲ್ಲಿ ನಡೆಯುತ್ತಿರುವ ಅಮಾನವೀಯ ಹಾಗೂ ಕಾನೂನು ಬಾಹಿರ ಕೃತ್ಯಗಳ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಮೊದಲು ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆ ಹಾಗೂ ಮಧ್ಯಾಹ್ನ 2 ರಿಂದ ರಾತ್ರಿ 8 ಗಂಟೆ ತನಕ ಕೆಲಸದ ಅವಧಿ ನಿಗದಿಪಡಿಸಲಾಗಿತ್ತು. ಇದೀಗ ಯಾವುದೇ ಮುನ್ಸೂಚನೆ ನೀಡದೆ ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಕೆಲಸದ ಅವಧಿಯನ್ನು ಬೆಳಗ್ಗೆ 8 ರಿಂದ ಸಾಯಂಕಾಲ 5 ಗಂಟೆ ತನಕ ಮತ್ತು ಬೆಳಗ್ಗೆ 10 ರಿಂದ ರಾತ್ರಿ 7 ಗಂಟೆ ತನಕ ನಿಗದಿಪಡಿಸಲಾಗಿದೆ. ಕೇಂದ್ರದಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಿಸಿಕೊಂಡು ಇರುವ ಹಿರಿಯ ಸಿಬ್ಬಂದಿಯನ್ನು ಅವಮಾನಿಸಲಾಗುತ್ತಿದೆ ಎಂದು ಕೇಂದ್ರದಲ್ಲಿ ಸುಮಾರು ಐದು ವರ್ಷಗಳಿಂದ ದುಡಿಯುತ್ತಿರುವ ಸಿಬ್ಬಂದಿ ವಿದ್ಯಾ ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News