ಜಾಗತೀಕರಣವು ಮಾನವೀಕರಣದತ್ತ ಸಾಗಲಿ: ಡಾ.ಹೆಗ್ಗಡೆ

Update: 2016-08-27 13:31 GMT

ಉಡುಪಿ, ಆ.23: ಯಾಂತ್ರೀಕರಣದ ಪ್ರಭಾವದಿಂದ ಇಂದು ಜಗತ್ತಿನಾದ್ಯಂತ ಗುಡಿ ಹಾಗೂ ಗೃಹ ಕೈಗಾರಿಕೆಗಳು ನಷ್ಟಕ್ಕೆ ಗುರಿಯಾಗಿವೆ. ಈ ಹಿನ್ನೆಲೆಯಲ್ಲಿ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಹಾಗೂ ಆಧುನೀಕರಣಗಳು ಮಾನವೀಕರಣದತ್ತ ಸಾಗಬೇಕಾಗಿದೆ. ಮನುಷ್ಯ, ಸಮಾಜ, ಗುಂಪು ಕಸುಬಿನ ವ್ಯಕ್ತಿತ್ವವನ್ನು ಉಳಿಸದೆ ಸಂಗ್ರಹಿಸುವ ಯಾವುದೇ ಸಂಪತ್ತು ಶಾಶ್ವತ ಅಲ್ಲ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾದ 70ರ ಸಂಭ್ರಮಾಚರಣೆ ಪ್ರಯುಕ್ತ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸ್ಮಾರಕ ಸಭಾ ಭವನದಲ್ಲಿ ಆಯೋಜಿಸಲಾದ ಎರಡು ದಿನಗಳ ಕರಾವಳಿ ಶೆಟ್ಟಿಗಾರ್ ಸಮಾವೇಶವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ವಂಶವಾಹಿಯಾಗಿ ಬಂದಿರುವ ಎಲ್ಲ ಸಮಾಜದ ಕುಲಕಸುಬುಗಳ ಮೇಲೆ ಯಾಂತ್ರೀಕರಣದಿಂದ ದೊಡ್ಡ ಹೊಡೆತ ಬಿದ್ದಿದೆ. ನೇಕಾರರು ತಮಗೆ ಸರ ಕಾರದಿಂದ ಯಾವುದೇ ಸೌಲಭ್ಯಗಳು ಸಿಕ್ಕಿಲ್ಲ ಎಂದು ಹತಾಶರಾಗಬಾರದು. ಸರಕಾರ ಗುರುತಿಸಿದರೆ ನಮ್ಮ ಪ್ರಗತಿಯಾಗಬಹುದೆಂಬ ಭ್ರಮೆಯಲ್ಲಿ ಕೂಡ ಇರಬಾರದು ಎಂದ ಅವರು, ನಮ್ಮ ಶ್ರಮಕ್ಕೆ ಉತ್ತಮ ದರ ಸಿಗುವಂತೆ ಸಹಕಾರಿ ಸಂಘಗಳನ್ನು ಸ್ಥಾಪಿಸಬೇಕು. ಕುಶಲಕರ್ಮಿಗಳು ದುಶ್ಚಟಗಳಿಗೆ ಬಲಿಯಾಗುವುದನ್ನು ತಡೆಯಬೇಕು. ಇನ್ನೊಬ್ಬರಿಂದ ಮಾರುಕಟ್ಟೆಯನ್ನು ಅವಲಂಬಿಸಿರಬಾರದು. ಆದಷ್ಟು ಕುಲಕಸುಬುಗಳಲ್ಲಿ ಯಾಂತ್ರೀಕರಣವನ್ನು ಅಳವಡಿಸುವ ಕಾರ್ಯ ಮಾಡಬೇಕು ಎಂದರು.

ಕಾರ್ಯಕ್ಷೇತ್ರದಲ್ಲಿ ಸಹಕಾರ ಇರಬೇಕು. ಹಿರಿಯರ ಮಾರ್ಗದರ್ಶನ ಕಿರಿಯರ ಶ್ರಮ ಮುಖ್ಯ. ಪ್ರೀತಿ, ಕರುಣೆಯ ಸೇತುವೆ ಕಟ್ಟುವ ಮೂಲಕ ಉತ್ತಮ ಸಮಾಜ ಕಟ್ಟಲು ಸಾಧ್ಯ. ಸಮಾಜ ಸುಧಾರಣೆ ಆಗುವ ಮೊದಲು ಜನ ಸುಧಾರಣೆಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಬ್ರಿಟಿಷರ ಆಗಮಕ್ಕೆ ಮೊದಲು ಸ್ವಾವಲಂಬಿಯಾಗಿದ್ದ ಭಾರತ ನಂತರ ಪರಾವಲಂಬನೆಯತ್ತ ಸಾಗಿತು. ಮತ್ತೆ ನಾವು ಆ ದಿಕ್ಕಿನತ್ತ ಸಾಗುವ ಕಾರ್ಯ ಮಾಡಬೇಕಾಗಿದೆ. ಅದಕ್ಕಾಗಿ ಪ್ರತಿಯೊಬ್ಬರ ಕೈಗೆ ಕೆಲಸ ಕೊಡುವ ಕಾರ್ಯ ಆಗಬೇಕು ಎಂದು ಹೇಳಿದರು.

ಪ್ರಧಾನಿ ಮೋದಿ ಘೋಷಣೆಯ ಕೇವಲ ಮೂರೇ ತಿಂಗಳಲ್ಲಿ ಖಾದಿಯ ಉತ್ಪಾದನೆಯು ಶೇ.103ರಷ್ಟು ಹೆಚ್ಚಾಗಿದೆ. ನಾವು ಕೂಡ ಕೈ ಮಗ್ಗದಿಂದ ತಯಾರಿಸಿದ ಬಟ್ಟೆಯನ್ನು ತಿಂಗಳಲ್ಲಿ ಒಮ್ಮೆ ಧರಿಸುವ ಸಂಕಲ್ಪ ಮಾಡಿದರೆ ನೇಕಾರಿಗೆ ಮತ್ತೆ ಮರುಜೀವ ನೀಡಬಹುದಾಗಿದೆ. ಅದೇ ರೀತಿ ಸರಕಾರ ಪ್ರತಿ ಜಿಲ್ಲೆಯಲ್ಲಿ ನೇಕಾರರ ಭವನ ನಿರ್ಮಿಸುವ ಕಾರ್ಯ ಮಾಡಬೇಕು. ಇದಕ್ಕೆ ನಾನು ಕೂಡ ಪ್ರಯತ್ನ ಮಾಡುತ್ತೇನೆ ಎಂದರು.

ಅಧ್ಯಕ್ಷತೆಯನ್ನು ಮಹಾಸಭಾದ ಅಧ್ಯಕ್ಷ ಡಿ.ಪುರಂದರ ಶೆಟ್ಟಿಗಾರ್ ವಹಿಸಿದ್ದರು. ಮುಖ್ಯಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀ ನಾರಾಯಣ, ತಾಲೂಕು ಬಂಟರ ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿದರು.

ಮುಂಬೈ ಪದ್ಮಶಾಲಿ ಸಮಾಜ ಸೇವಾ ಸಂಘದ ಅಧ್ಯಕ್ಷ ದಯಾನಂದ ಶೆಟ್ಟಿಗಾರ್, ಬೆಂಗಳೂರು ದ.ಕ.ಪದ್ಮಶಾಲಿ ಸಮಾಜ ಸೇವಾ ಕೂಟದ ಅಧ್ಯಕ್ಷ ಪ್ರಕಾಶ್ಚಂದ್ರ ಆತ್ರಾಡಿ, ದುಬೈಯ ವರದರಾಜ ಶೆಟ್ಟಿಗಾರ್, ಶ್ರೀನಿವಾಸ ಶೆಟ್ಟಿಗಾರ್ ಮಂಗಳೂರು, ಸರೋಜಿನಿ ಶೆಟ್ಟಿಗಾರ್, ವಿಠಲ ಶೆಟ್ಟಿಗಾರ್ ಕಾಟಿಪಳ್ಳ ಮತ್ತು 16 ಶ್ರೀವೀರಭದ್ರ ದೇವಸ್ಥಾನಗಳ ಆಡಳಿತ ಮೊಕ್ತೇಸರ, ಅಧ್ಯಕ್ಷರು, ಗುರಿಕಾರರು ಉಪಸ್ಥಿತರಿದ್ದರು.

ಸಮಾವೇಶದ ಗೌರವ ಸಂಚಾಲಕ ಅಂಬಾತನಯ ಮುದ್ರಾಡಿ ಸ್ವಾಗತಿಸಿದರು. ಸಂಚಾಲಕ ಗಿರೀಶ್ ಶೆಟ್ಟಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಸದಾಶಿವ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News