ಅಶಕ್ತ ಜನಪದ ಕಲಾವಿದರಿಗೆ ಮಾಸಾಶನ ಅಗತ್ಯ:ಕೋಟ

Update: 2016-08-27 13:44 GMT

ಮಂದಾರ್ತಿ, ಆ.27: ನಮ್ಮ ಗ್ರಾಮೀಣ ಭಾಗಗಳಲ್ಲಿ ಈಗಲೂ ಸಾಕಷ್ಟು ಮಂದಿ ಜನಪದ ಕಲಾವಿದರು ಇದ್ದಾರೆ. ಅಂಥವರನ್ನು ಗುರುತಿಸುವ ಕೆಲಸ ವಾಗಬೇಕು ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಮುಗ್ಧ ಅಶಕ್ತ ಕಲಾವಿದರಿಗೆ ಮಾಸಾಶನ ಸಿಗುವಂತಾಗಬೇಕು ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮಂಗಳೂರು ಆಕಾಶವಾಣಿ, ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಸಹಯೋಗದೊಂದಿಗೆ ಮಂದಾರ್ತಿ ದುರ್ಗಾಪರಮೇಶ್ವರಿ ದೇವಳದ ಸಭಾಭವನದಲ್ಲಿ ಆಯೋಜಿಸಿದ ಕುಂದಗನ್ನಡದ ಹಾಡುಗಬ್ಬ ‘ಕೋಲು ಹೊಯ್ಯುವ ಪದಗಳು’ ಕುರಿತ ಎರಡು ದಿನಗಳ ದಾಖಲಾತಿ ಕಮ್ಮಟವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಭಾವನೆಗಳನ್ನು, ಸೌಹಾರ್ದ ಮತ್ತು ಸಾಮರಸ್ಯದ ಬದುಕನ್ನು ಆಡು ಭಾಷೆಯ ಮೂಲಕ ತಿಳಿಸುವಂತೆ ಮಾಡುವ ಇಂತಹ ಮುಗ್ಧ ಕಲಾವಿದರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸಂದುಹೋದ ಇತಿಹಾಸದ ಕಟ್ಟಕಡೆಯ ಪಳೆಯುಳಿಕೆಯಂತಿರುವ ಇಂಥ ಜಾನಪದ ಸಾಹಿತ್ಯಗಳ ದಾಖಲಾತಿ ಮಾಡಿ ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ತುರ್ತಾಗಿ ಆಗಬೇಕು. ಇಂಥ ಕಾರ್ಯಕ್ಕೆ ಮುಂದಾದ ಆಕಾಶವಾಣಿಯ ಕಾರ್ಯಕ್ರಮ ಅಭಿನಂದನಾರ್ಹ ಎಂದು ಮಾಜಿ ಸಚಿವರು ಹೇಳಿದರು.

ಅರಿವು ಅಗತ್ಯ:

ನಮ್ಮ ಇತಿಹಾಸ, ಚರಿತ್ರೆಯ ಬಗ್ಗೆ ತಿಳಿಯದೇ ಇದ್ದರೆ ಚಾರಿತ್ರಹೀನ ಸಮಾಜ ಸಷಿಯಾಗುತ್ತದೆ. ಆದ್ದರಿಂದ ಚರಿತ್ರೆಯನ್ನು ತಿಳಿಸುವ ಜಾನಪದ ಸಾಹಿತ್ಯಗಳನ್ನು ದಾಖಲಾತಿ ಮಾಡಿ ಉಳಿಸುವಂತಾಗಬೇಕು ಎಂದು ಮಂಗಳೂರು ವಿವಿ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಉದಯ ಬಾರ್ಕೂರು ಹೇಳಿದರು.

ಕಾರ್ಯಕ್ರಮದಲ್ಲಿ ‘ಚರಿತ್ರೆ ಮತ್ತು ಚಾರಿತ್ರ’ ವಿಷಯದ ಕುರಿತು ಉಪನ್ಯಾಸ ನೀಡಿದ ಡಾ.ಬಾರ್ಕೂರು, ಯುವ ಜನಾಂಗ ಜಾನಪದ ಇತಿಹಾಸ ತಿಳಿಸುವ ಸಂಸ್ಕಾರಯುತ ಬದುಕನ್ನು ಕಟ್ಟುವ ಇಂತಹ ಜನಪದ ಸಾಹಿತ್ಯವನ್ನು ಉಳಿಸಿ ಬೆಳೆಸಲು ಮುಂದೆ ಬರಬೇಕು ಎಂದರು.

ಮಂಗಳೂರು ಆಕಾಶವಾಣಿಯಕಾರ್ಯಕ್ರಮ ಮುಖ್ಯಸ್ಥ ಹಾಗೂ ಸಹಾಯಕ ನಿಲಯ ನಿರ್ದೇಶಕ ಸಡಾ.ವಸಂತಕುಮಾರ ಪೆರ್ಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್.ಧನಂಜಯ ಶೆಟ್ಟಿ, ಸಮಿತಿ ಸದಸ್ಯ ಗೋಪಾಲ ನಾಯ್ಕ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕ ಮಂಗಳೂರು ಆಕಾಶವಾಣಿಯ ಡಾ. ಸದಾನಂದ ಪೆರ್ಲ ಸ್ವಾಗತಿಸಿ, ನಿರ್ವಾಹಕ ದೇವು ಹನೆಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News