ಮಂಜನಾಡಿಯಿಂದ ಅಪಹರಣಕ್ಕೊಳಗಾಗಿದ್ದ ಯುವಕ ಕೊಣಾಜೆ ಠಾಣೆಗೆ ಹಾಜರು

Update: 2016-08-27 14:06 GMT

ಕೊಣಾಜೆ, ಆ.27: ವಿದೇಶದಿಂದ ಕಳೆದ ಕೆಲ ತಿಂಗಳ ಹಿಂದೆ ಊರಿಗೆ ಬಂದು ವ್ಯಾಪಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬರ ಅಪಹರಣ ಪ್ರಕರಣವು ತಿರುವು ಪಡೆದಿದ್ದು ಅಪಹರಣಕ್ಕೊಳಗಾದ ಮಂಜನಾಡಿ ಕಲ್ಕಟ್ಟ ನಿವಾಸಿ ಆರೀಫ್ (24) ಕೊಣಾಜೆ ಠಾಣೆಗೆ ಹಾಜರಾಗಿ ಪ್ರಕರಣದ ಮಾಹಿತಿ ನೀಡಿದ್ದಾರೆ.
ಅಪಹರಣಕಾರರೇ ಬಸ್ಸಿಗೆ ಹಣ ನೀಡಿ ಸುಳ್ಯ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾರೆಂದು ಕೊಣಾಜೆ ಪೊಲೀಸ್ ಠಾಣೆಗೆ ಬಂದಿರುವ ಆರೀಫ್ ಪೊಲೀಸರಲ್ಲಿ ತಿಳಿಸಿದ್ದಾರೆ.

ವಿದೇಶದಲ್ಲಿ ಕೆಲಸದಲ್ಲಿದ್ದ ಆರೀಪ್ ಕೆಲ ತಿಂಗಳುಗಳ ಹಿಂದೆ ಊರಿಗೆ ವಾಪಸಾಗಿದ್ದರು. ನಂತರ ಮೀನಿನ ವ್ಯಾಪಾರ ಆರಂಭಿಸಿದ್ದ ಆರೀಫ್ ಚೆಂಬುಗುಡ್ಡೆ ಸಮೀಪ ಮೀನು ವ್ಯಾಪಾರ ನಡೆಸಿ ಜೀವನ ಸಾಗಿಸುತ್ತಿದ್ದರು. ಕೆಲದಿನಗಳ ಹಿಂದೆ ಮಂಜನಾಡಿಯಿಂದ ಮಂಗಳೂರಿನ ದಕ್ಕೆಗೆ ತೆರಳುವ ಸಂದರ್ಭ ಸ್ಕಾರ್ಪಿಯೋ ವಾಹನದಲ್ಲಿ ಬಂದಿದ್ದ ತಂಡ ನಸುಕಿನ ಜಾವ ಕಲ್ಕಟ್ಟದಿಂದ ಅಪಹರಿಸಿತ್ತು. ಬಳಿಕ ಮನೆ ಮಂದಿಗೆ ವಿದೇಶದ ದೂರವಾಣಿ ಸಂಖ್ಯೆ ಮೂಲಕ ಬಂದ ಕರೆಯ ಮೂಲಕ 1.5 ಕೋಟಿ ರೂ.ಗೆ ಬೇಡಿಕೆ ಇಡಲಾಗಿತ್ತು. ಇಲ್ಲವಾದಲ್ಲಿ ಕೊಲ್ಲುವ ಬೆದರಿಕೆಯನ್ನು ಅಪಹರಣಕಾರರು ಹಾಕಿದ್ದರು. ಅದರಂತೆ ಮನೆಮಂದಿ ಬೆದರಿ 25 ಲಕ್ಷ ರೂ. ಕೊಡುವ ವಿಶ್ವಾಸ ನೀಡಿದರೂ ಅಪಹರಣಕಾರರು ಒಪ್ಪಿರಲಿಲ್ಲ. ಇದರಿಂದ ದಾರಿ ಕಾಣದ ಕುಟುಂಬ ತಡವಾಗಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಈ ವೇಳೆ ಉಪ್ಪಿನಂಗಡಿಯ ಹಾಗೂ ಕಾಸರಗೋಡಿನ ಮೂಲದ ವ್ಯಕ್ತಿಗಳ ತಂಡ ಅಪಹರಿಸಿರುವುದಾಗಿ ತಿಳಿಸಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಕೊಣಾಜೆ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದರೂ ಪ್ರಯೋಜನವಾಗಿರಲಿಲ್ಲ. ಈ ನಡುವೆ ಗುರುವಾರ ಏಕಾಏಕಿ ಆರಿಫ್ ಕೊಣಾಜೆ ಠಾಣೆಗೆ ಬಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಆರೀಪ್ ವಿದೇಶದಲ್ಲಿರುವ ಸಂದರ್ಭ 40,00,000 ರೂ.ನಷ್ಟು ನಗದನ್ನು ಪರಿಚಯದ ಮೇರೆಗೆ ಪಡೆದುಕೊಂಡಿದ್ದರು. ಆದರೆ, ಅದನ್ನು ವಾಪಸ್ಸು ಮಾಡದೇ ಊರಿಗೆ ಮರಳಿದ್ದರು ಎನ್ನಲಾಗಿದ್ದು, ನೀಡಿದ ಹಣ ಪಡೆಯಲೆಂದೇ ತಂಡ ಅಪಹರಿಸಿರುವ ಸಾಧ್ಯತೆಗಳಿವೆ ಎಂದು ಶಂಕಿಸಲಾಗಿದೆ. ಅಪಹರಣಕಾರರು ಆರಿಫ್‌ರನ್ನು ತಮಿಳುನಾಡಿಗೆ ಕರೆದೊಯ್ದು ಅಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಇರಿಸಿದ್ದಾರೆಂದು ಆರಿಫ್ ಪೊಲೀಸರಿಗೆ ತಿಳಿಸಿದ್ದರೂ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ ಎನ್ನಲಾಗಿದೆ. ಈ ಬಗ್ಗೆ ಕೊಣಾಜೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News