ರಮ್ಯಾರನ್ನು ಟೀಕಿಸುವ ನೈತಿಕತೆ ಬಿಜೆಪಿ, ಸಂಘ ಪರಿವಾರಕ್ಕಿಲ್ಲ: ಶಕುಂತಳಾ ಶೆಟ್ಟಿ

Update: 2016-08-27 14:45 GMT

ಪುತ್ತೂರು, ಆ.27: ಮಾಜಿ ಸಂಸದೆ ರಮ್ಯಾ ಅವರು ಪಾಕಿಸ್ತಾನದ ಸಾಮಾನ್ಯ ಜನರ ಬಗ್ಗೆ ಹೇಳಿರುವ ಒಳ್ಳೆಯ ಮಾತುಗಳನ್ನು ಮಹಾ ಅಪರಾಧ ಎಂದು ಬಿಂಬಿಸುತ್ತಿರುವ ಬಿಜೆಪಿ ನಾಯಕರು ಒಬ್ಬರಿಗಿಂತ ಒಬ್ಬರು ತಾ ಮುಂದು ತಾಮುಂದು ಎಂಬಂತೆ ಪಾಕಿಸ್ತಾನಕ್ಕೆ ಹೋಗಿ ಹಾಡಿ ಹೊಗಳಿ ಬಂದವರು ಎಂದು ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.

ಪುತ್ತೂರು ನಗರ ಕಾಂಗ್ರೆಸ್ ಆಶ್ರಯದಲ್ಲಿ ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ರಮ್ಯಾ ವಿರುದ್ಧ ಬಿಜೆಪಿ ಪರಿವಾರ ಮಾಡುತ್ತಿರುವ ಆರೋಪಗಳ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿತ್ತು.

ಪ್ರಧಾನಿಯಾಗಿದ್ದ ವಾಜಪೇಯಿ ಅವರು ಪಾಕಿಸ್ತಾನಕ್ಕೆ ಬಸ್‌ನಲ್ಲಿ ಹೋಗಿ ಅಲ್ಲಿನ ಪ್ರಧಾನಿಯನ್ನು ಆಲಂಗಿಸಿ ಬಂದರು. ಅವರದೇ ಸರಕಾರ ಇರುವಾಗ ಪಾಕ್ ಬೆಂಬಲಿತ ಉಗ್ರರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ಎಲ್.ಕೆ. ಆಡ್ವಾಣಿ ಅವರಂತೂ ಮಹಮ್ಮದ್ ಆಲಿ ಜಿನ್ನಾ ಅವರನ್ನು ಹಾಡಿ ಹೊಗಳಿದರು. ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನಕ್ಕೆ ಹೋಗಿ ಬಂದರು. ಪ್ರಧಾನಿ ಮೋದಿ ಅವರು ಆಮಂತ್ರಣವಿಲ್ಲದೆಯೇ ಪಾಕಿಸ್ತಾನಕ್ಕೆ ಹೋಗಿ ನವಾಜ್ ಶರೀಫ್ ಮೊಮ್ಮಗಳ ಹುಟ್ಟು ಹಬ್ಬದ ಗೌಜಿಯಲ್ಲಿ ಪಾಲ್ಗೊಂಡರು. ಅವರ ತಾಯಿಗೆ ಸೀರೆ ಕೊಟ್ಟು ಬಂದರು. ಬಿಜೆಪಿಯವರು ಇದನ್ನೆಲ್ಲ ಮಾಡಿದರೆ ಅದು ದೇಶಪ್ರೇಮ, ಬಾಂಧವ್ಯ ವೃದ್ಧಿ ಎಂದೆನಿಸಿಕೊಳ್ಳುತ್ತದೆ. ಅದೇ ಒಬ್ಬ ಹೆಣ್ಣು ಮಗಳು ರಮ್ಯಾ ಪಾಕಿಸ್ತಾನದಲ್ಲಿ ಒಳ್ಳೆಯ ಜನರಿದ್ದಾರೆ ಎಂದು ಹೇಳಿದ್ದೇ ಮಹಾ ಪಾಪ ಎಂದು ಬಿಂಬಿಸಲಾಗಿದೆ. ಬಿಜೆಪಿಯರು ಮೊದಲು ತಮ್ಮವರ ಕೆಲಸದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

ಮಹಿಳಾ ನಾಯಕಿ ವಿಶಾಲಾಕ್ಷಿ ಪೂಜಾರಿ ಮಾತನಾಡಿ, ಹಿಂದುತ್ವದ ಹೆಸರು ಹೇಳಿಕೊಂಡು ಬೇರೆ ಧರ್ಮದವರ ಮೇಲೆ ದಾಳಿ ಮಾಡುತ್ತಿದ್ದವರು ಈಗ ಹಿಂದೂ ಧರ್ಮೀಯರ ಮೇಲೆ ದಾಳಿ ಮಾಡುತ್ತಿದ್ದಾರೆ. ಇದಕ್ಕಾಗಿ ದಲಿತರು ಮತ್ತು ಹಿಂದುಳಿದ ವರ್ಗದವರನ್ನು ಹತ್ಯೆ ಮಾಡುತ್ತಿದ್ದಾರೆ. ಇದರ ಬಗ್ಗೆ ಜಾಗೃತಿ ಅಗತ್ಯ ಎಂದರು. ಶಶಿಕಲಾ ರೈ ಮಾತನಾಡಿದರು.

ಮಾಜಿ ಸಂಸದೆ ರಮ್ಯಾ ವಿರುದ್ಧ ಬಿಜೆಪಿ ಮತ್ತು ಅದರ ಪರಿವಾರ ಸಂಘಟನೆಗಳು ಮಾಡುತ್ತಿರುವ ಆರೋಪಗಳನ್ನು ಖಂಡಿಸಿ ನಿರ್ಣಯ ಅಂಗೀಕರಿಸಲಾಯಿತು. ವಿಲ್ಮಾ ಗೋನ್ಸಾಲ್ವಿಸ್ ನಿರ್ಣಯ ಮಂಡಿಸಿದರು. ರೂಪರೇಖಾ ಆಳ್ವ ಅನುಮೋದಿಸಿದರು. ಸಭೆ ಒಕ್ಕೊರಲಿನಿಂದ ಅಂಗೀಕರಿಸಿತು.

ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಬಿಜೆಪಿ ಮತ್ತು ಅದರ ಸಂಘಟನೆಗಳು ಮಾಡುವ ಸುಳ್ಳು ಪ್ರಚಾರಗಳಿಗೆ ತಕ್ಷಣ ಉತ್ತರ ನೀಡುವ ಪರಿಪಾಠವನ್ನು ಕಾಂಗ್ರೆಸ್ ಆರಂಭಿಸಲಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಂ ಮತ್ತು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹರಿಣಾಕ್ಷಿ ಶೆಟ್ಟಿ ವಂದಿಸಿದರು. ಇಸಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News