ಓಲೈಕೆಯ ರಾಜಕಾರಣದಿಂದ ದೇಶಕ್ಕೆ ಗಂಡಾಂತರ: ಶಾಸಕ ಅಂಗಾರ

Update: 2016-08-27 16:24 GMT

ಸುಳ್ಯ, ಆ.27: ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಸಂಸ್ಥೆಯ ಹಾಗೂ ಅದರ ದೇಶದ್ರೋಹಿ ಹೇಳಿಕೆಯನ್ನು ರಾಜ್ಯ ಸರಕಾರ ಸಮರ್ಥಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಮಂಡಲ ಸಮಿತಿ ವತಿಯಿಂದ ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.

ಪಕ್ಷದ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಸ್.ಅಂಗಾರ ಮಾತನಾಡಿ, ಓಲೈಕೆಯ ರಾಜಕಾರಣದಿಂದ ದೇಶಕ್ಕೆ ಗಂಡಾಂತರ ಬಂದಿದೆ. ರಕ್ಷಣೆಯ ಬಗ್ಗೆ ಅವಹೇಳನ ಮಾಡುವವರ, ದೇಶ ವಿರೋಧಿ ಘೋಷಣೆ ಕೂಗುವವರ ವಿರುದ್ಧದ ಕೇಸನ್ನು ಮುಚ್ಚಿ ಹಾಕಲು, ಅರವಿಂದ ಜಾಧವ್‌ಗೆ ರಕ್ಷಣೆ ನೀಡಲು ರಾಜ್ಯ ಸರಕಾರ ಯತ್ನಿಸುತ್ತಿದೆ. ಲೋಕಾಯುಕ್ತದ ಬದಲು ಎಸಿಬಿ ರಚಿಸಿ ಭ್ರಷ್ಟಾಚಾರಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ರಾಷ್ಟ್ರ ವಿರೋಧಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದರು.

ಪಕ್ಷದ ನಗರ ಘಟಕದ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಮಾತನಾಡಿ, ದೇಶವನ್ನು ಮೂರು ತುಂಡು ಮಾಡಿದ ಕಾಂಗ್ರೆಸ್‌ನವರು ತಮ್ಮ ಪಕ್ಷ ಮಾತ್ರ ಸ್ವಾತಂತ್ರ್ಯ ಹೋರಾಟ ನಡೆಸಿದೆ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ದೇಶವನ್ನು ನಿರಂತರ ವಿಭಜನೆಗೆ ಯತ್ನಿಸುತ್ತಿದ್ದಾರೆ ಎಂದರು. ಆಮ್ನೆಸ್ಟಿ ಸಂಸ್ಥೆ ಯಾವ ತಪ್ಪೂಮಾಡಿಲ್ಲ ಎಂದು ಹೇಳಿಕೆ ನೀಡಲು ದಿಗ್ವಿಜಯ್ ಸಿಂಗ್‌ಗೆ ಯಾವ ಅಧಿಕಾರವಿದೆ ಎಂದು ಪ್ರಶ್ನಿಸಿದ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಭಸ್ಮಾಸುರನಂತೆ ಕಾಂಗ್ರೆಸ್‌ನ್ನು ನಿರ್ಮೂಲನೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಎ.ವಿ.ತೀರ್ಥರಾಮ ಮಾತನಾಡಿ, ದೇಶದ್ರೋಹಿ ಹೇಳಿಕೆ ನೀಡುವವರ ಮೇಲೆ ಕ್ರಮಕ್ಕೆ ಆಗ್ರಹಿಸಿದರು. ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ಹೆಗ್ಡೆ, ಕಿಶೋರ್ ಶಿರಾಡಿ, ಜಿಲ್ಲಾ ಘಟಕದ ಉಪಾಧ್ಯಕ್ಷೆ ಭಾಗೀರಥಿ ಮುರುಳ್ಯ, ಜಿಲ್ಲಾ ಪಂಚಾಯತ್ ಸದಸ್ಯರಾದ ಆಶಾ ತಿಮ್ಮಪ್ಪ, ಹರೀಶ್ ಕಂಜಿಪಿಲಿ, ಮಾಜಿ ಸದಸ್ಯ ನವೀನ್ ಕುಮಾರ್ ಮೇನಾಲ, ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಸದಸ್ಯರಾದ ಪುಷ್ಪಾ ಮೇದಪ್ಪ, ನಗರ ಪಂಚಾಯತ್ ಉಪಾಧ್ಯಕ್ಷೆ ಮೀನಾಕ್ಷಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೋಹಿನಿ ನಾಗರಾಜ್, ಸದಸ್ಯರಾದ ಗಿರೀಶ್ ಕಲ್ಲುಗದ್ದೆ, ಕಿರಣ ಕುರುಂಜಿ, ರಮಾನಂದ ರೈ, ಶೀಲಾವತಿ, ಸುನೀತಾ ಮೊಂತೆರೊ, ಹರಿಣಾಕ್ಷಿ ನಾರಾಯಣ, ಮುಖಂಡರಾದ ಪಿ.ಕೆ.ಉಮೇಶ, ಉಮೇಶ್ ವಾಗ್ಲೆ, ಸುವರ್ಣೀನಿ, ಬೂಡು ರಾಧಾಕೃಷ್ಣ, ರಾಕೇಶ್ ರೈ ಕೆಡೆಂಜಿ, ಗುಣವತಿ ಕೊಲ್ಲಂತಡ್ಕ, ಮಮತಾ ಬೊಳುಗಲ್ಲು, ಸರೋಜಿನಿ, ಸಂಜಯಕುಮಾರ್ ಮೊದಲಾದವರಿದ್ದರು. ಹರೀಶ್ ಬೂಡುಪನ್ನೆ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News