ಗಾಂಧಿ ಹತ್ಯೆಯ ದಿನ ಆರೆಸ್ಸೆಸ್ ಸಿಹಿ ತಿಂಡಿ ಹಂಚಿತ್ತು: ಕಾಂಗ್ರೆಸ್
ಹೊಸದಿಲ್ಲಿ, ಆ.27: ಮಹಾತ್ಮ ಗಾಂಧಿಯವರ ಹತ್ಯೆಯಲ್ಲಿ ಆರೆಸ್ಸೆಸ್‌ನ ಪಾತ್ರದ ಕುರಿತು ನೀಡಿದ್ದ ಹೇಳಿಕೆಗಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ವಿರುದ್ಧ ಆರೆಸ್ಸೆಸ್ ದಾಳಿಯನ್ನು ಮುಂದುವರಿಸಿರುವಂತೆಯೇ, ಶಾಂತಿ ಹಾಗೂ ಸೌಹಾರ್ದದ ಮಹಾತ್ಮರ ಸಿದ್ಧಾಂತಗಳಿಗೆ ಆರೆಸ್ಸೆಸ್ ವಿರುದ್ಧವಾಗಿದೆಯೆಂಬುದು ತಿಳಿದಿರುವ ವಿಚಾರವೆಂದು ಕಾಂಗ್ರೆಸ್ ಒತ್ತಿ ಹೇಳಿದೆ.
ಪಕ್ಷವು ಆರೆಸ್ಸೆಸ್‌ನ ವಿರುದ್ಧ ಹೋರಾಟ ನಡೆಸಲಿದೆ. ಅದರ ಸಿದ್ಧಾಂತವನ್ನು ಎಲ್ಲ ರೀತಿಯಿಂದ ವಿರೋಧಿಸಲಿದೆ. ಅದು ಸ್ವಂತದ ಅನುಕೂಲಕ್ಕಾಗಿ ಕೆಲಸ ಮಾಡುತ್ತಿರುವ ಸಂಘಟನೆಯಾಗಿದೆಯೆಂದು ಕಾಂಗ್ರೆಸ್ ನಾಯಕ ರಿಝ್ವೆನ್ ಅರ್ಶದ್ ಎಎನ್‌ಐಗೆ ತಿಳಿಸಿದ್ದಾರೆ.
ಮಹಾತ್ಮಗಾಂಧಿ ಮೃತರಾದ ದಿನ ಆರೆಸ್ಸೆಸ್ ಸಿಹಿ ವಿತರಿಸಿತ್ತೆಂಬುದು ತಿಳಿದ ವಿಷಯವೇ ಅಗಿದೆ. ನಾಥೂರಾಮ್ ಗೋಡ್ಸೆ ಆರೆಸ್ಸೆಸ್‌ನ ಸದಸ್ಯನಾಗಿದ್ದನೆಂಬುದೂ ತಿಳಿದ ಸಂಗತಿಯೇ ಆಗಿದೆ. ದೇಶ ಒಗ್ಗಟ್ಟಿನಿಂದ ಹಾಗೂ ಎಲ್ಲ ಮತೀಯರೂ ಸೌಹಾರ್ದದಿಂದ ಬದುಕಬೇಕೆಂಬ ಗಾಂಧೀಜಿಯವರ ಬಯಕೆಯಿಂದ ಆರೆಸ್ಸೆಸ್ ಕಂಗೆಟ್ಟಿತೆಂಬುದೂ ಗೊತ್ತಿರುವ ಸಂಗತಿಯಾಗಿದೆಯೆಂದು ಅವರು ಹೇಳಿದ್ದಾರೆ. ಇದೇ ವೇಳೆ, ಆರೆಸ್ಸೆಸ್‌ನ ವಿರುದ್ಧ ಟೀಕೆ ಮಾಡುವ ಮೂಲಕ ರಾಹುಲ್ ತನ್ನದೇ ಪ್ರಾಮಾಣಿಕತೆಯೊಂದಿಗೆ ರಾಜಿಮಾಡಿಕೊಂಡಿದ್ದಾರೆಂದು ಆರೋಪಿಸಿರುವ ಬಿಜೆಪಿ, 1984ರ ಸಿಖ್ ವಿರೋಧಿ ದಂಗೆಯಲ್ಲಿ ಕಾಂಗ್ರೆಸ್ ಪಾಲ್ಗೊಂಡಿತ್ತೆಂದು ಅವರು ಒಪ್ಪಿಕೊಳ್ಳುವರೇ? ಎಂದು ಸವಾಲು ಹಾಕಿದೆ.
ರಾಹುಲ್‌ರ ತರ್ಕವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುವುದಾದರೆ, 1984ರಲ್ಲಿ ಸಿಖ್ಖರ ಮಾರಣ ಹೋಮಕ್ಕೆ ಕಾಂಗ್ರೆಸ್ ಹೊಣೆಯೆಂದು ತಾವು ಏಕೆ ಹೇಳಬಾರದು? ಸಿಖ್ ಹತ್ಯಾಕಾಂಡದಲ್ಲಿ ಕಾಂಗ್ರೆಸ್ ನಾಯಕರು ಒಳಗೊಂಡಿದ್ದರೆಂಬುದು ತಿಳಿದೇ ಇದೆ. ಆದರೆ, ಅದಕ್ಕೆ ಕಾಂಗ್ರೆಸ್ ಹೊಣೆ ಹಾಗೂ ಅದು ಕಾಂಗ್ರೆಸ್‌ನ ಪಿತೂರಿಯ ಒಂದು ಭಾಗವೆಂದು ತಾವು ಹೇಳಿದರೆ, ರಾಹುಲ್ ಅದನ್ನು ಒಪ್ಪಿಕೊಳ್ಳುವರೇ? ಎಂದು ಬಿಜೆಪಿ ನಾಯಕ ಸುದೇಶ್ ವರ್ಮ ಎಎನ್‌ಐಯ ಬಳಿ ಪ್ರಶ್ನಿಸಿದ್ದಾರೆ.