ಮಂಗಳೂರು: ವಕೀಲರಿಂದ ಕಲಾಪ ಬಹಿಷ್ಕಾರ
ಮಂಗಳೂರು, ಆ.27: ಚನ್ನರಾಯಪಟ್ಟಣ ನ್ಯಾಯಾಲಯದಲ್ಲಿ ಆ.23ರಂದು ನಡೆದ ಘಟನೆಯ ಹಿನ್ನೆಲೆಯಲ್ಲಿ ಶನಿವಾರ ಮಂಗಳೂರು ಬಾರ್ ಕೌನ್ಸಿಲ್ ನೇತೃತ್ವದಲ್ಲಿ ವಕೀಲರು ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಂಗಳೂರು ಬಾರ್ ಕೌನ್ಸಿಲ್ ಅಧ್ಯಕ್ಷ ಎಸ್.ಪಿ.ಚೆಂಗಪ್ಪ ಮಾತನಾಡಿ, ಹಾಸನ ಜಿಲ್ಲೆಯ ನ್ಯಾಯಾಂಗ ಕಲಾಪದ ಸಂದರ್ಭ ಪೊಲೀಸ್ ಅಧಿಕಾರಿ ತೋರಿದ ದುರ್ನಡತೆಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಉಪಾಧ್ಯಕ್ಷ ಯಶೋದರ ಕರ್ಕೆರಾ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಎಚ್.ವಿ, ಜೊತೆ ಕಾರ್ಯದರ್ಶಿ ಸುಮನ ಶರಣ, ಖಜಾಂಚಿ ಯತೀಶ್ ಕುಮಾರ್‌ಉಪಸ್ಥಿತರಿದ್ದರು.
*ಪ್ರಕರಣದ ಹಿನ್ನೆಲೆ: ಚಿಕ್ಕನಾಯಕನ ಹಳ್ಳಿಯ ಸರ್ಕಲ್ ಇನ್‌ಸ್ಪೆಕ್ಟರ್ 11 ಪ್ರಕರಣಗಳಿಗೆ ಸಂಬಂಧಿಸಿ ಚೆನ್ನರಾಯಪಟ್ಟಣದ ನ್ಯಾಯಾಲಯಕ್ಕೆ ಹಾಜರಾಗಲು ವಾರಂಟ್ ಆಗಿತ್ತು. ಆ ಪ್ರಕಾರ ಆ.23ರಂದು ಚೆನ್ನರಾಯ ಪಟ್ಟಣದ ನ್ಯಾಯಾಲಯಕ್ಕೆ ಹಾಜರಾದ ಇನ್‌ಸ್ಪೆಕ್ಟರ್ ನ್ಯಾಯಾಧೀಶರ ಬಳಿ ದುರ್ನಡತೆ ತೋರಿದರೆನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಅಲ್ಲಿನ ನ್ಯಾಯಾಧೀಶರು ಅವರನ್ನು ನ್ಯಾಯಾಂಗ ಬಂಧನದಲ್ಲಿಡಲು ಆದೇಶಿಸಿದ್ದರು. ಈ ಬಗ್ಗೆ ಆದೇಶ ಜಾರಿ ಮಾಡಲು ಬಂದ ಸ್ಥಳೀಯ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಕೂಡಾ ನ್ಯಾಯಾಧೀಶರ ಜೊತೆ ಸರ್ಕಲ್ ಇನ್‌ಸ್ಪೆಕ್ಟರನ್ನು ಸಮರ್ಥಿಸಿಕೊಂಡರೆನ್ನಲಾಗಿದೆ.
ಈ ಮಧ್ಯೆ ನ್ಯಾಯಾಲಯದ ಆವರಣದೊಳಗೆ ನುಗ್ಗಿದ ಕೆಲವು ದುಷ್ಕರ್ಮಿಗಳು ನ್ಯಾಯಾಲಯದ ಕೊಠಡಿಯ ಗಾಜು ಪುಡಿ ಮಾಡಿ ದಾಂಧಲೆ ನಡೆಸಿದ್ದು, ಇದನ್ನು ಅಲ್ಲಿನ ನ್ಯಾಯವಾದಿಗಳು ವಿರೋಧಿಸಿದ್ದಾರೆ. ಬಳಿಕ ಪೊಲೀಸರು ನ್ಯಾಯಾಲಯದ ಆವರಣಕ್ಕೆ ಬೀಗ ಜಡಿದರೆನ್ನಲಾಗಿದೆ. ರಾತ್ರಿ 11 ಗಂಟೆಗೆ ಹಾಸನದಿಂದ ಚೆನ್ನರಾಯ ಪಟ್ಟಣಕ್ಕೆ ಆಗಮಿಸಿದ ಹಾಸನ ಜಿಲ್ಲಾ ನ್ಯಾಯಾಧೀಶರು,ಚೆನ್ನರಾಯ ಪಟ್ಟಣ ನ್ಯಾಯಾಧೀಶರು ನೀಡಿದ ಆದೇಶಕ್ಕೆ ತಡೆ ಆಜ್ಞೆ ನೀಡಿ ಸರ್ಕಲ್ ಇನ್‌ಸ್ಪೆಕ್ಟರ್‌ರ ಬಿಡುಗಡೆಗೆ ಆದೇಶಿಸಿದ್ದರು.
ಚೆನ್ನರಾಯಪಟ್ಟಣದಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಇರುವಾಗ ಹಾಸನದಿಂದ ಬಂದ ಜಿಲ್ಲಾ ನ್ಯಾಯಾಧೀಶರು ಮಾಡಿರುವ ಕ್ರಮವೂ ಸಮರ್ಪಕವಾಗಿಲ್ಲ ಎಂದು ಎಸ್.ಪಿ.ಚಂಗಪ್ಪ ಆರೋಪಿಸಿದ್ದಾರೆ.
ಹಾಗಾಗಿ ನ್ಯಾಯಾಂಗದ ಕಲಾಪದಲ್ಲಿ ದುರ್ನಡತೆ ತೋರಿದ ಪೊಲೀಸ್ ಅಧಿಕಾರಿಗಳ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ಚಂಗಪ್ಪ ಒತ್ತಾಯಿಸಿದ್ದಾರೆ.