ಕಾಶ್ಮೀರ ಪ್ರತ್ಯೇಕತಾವಾದಿಗಳ ಜೊತೆ ಮಾತುಕತೆಗೆ ಮನಸ್ಸು ಮಾಡಿದ ಕೇಂದ್ರ
ಶ್ರೀನಗರ, ಆ.28: ಕಾಶ್ಮೀರ ಪ್ರತ್ಯೇಕತಾವಾದಿಗಳ ಜತೆ ಮಾತುಕತೆ ನಡೆಸಲು ಕೊನೆಗೂ ಕೇಂದ್ರ ಸರ್ಕಾರ ಮನಸ್ಸು ಮಾಡಿದೆ. ಶ್ರೀನಗರಕ್ಕೆ ಮುಂದಿನ ತಿಂಗಳು ಭೇಟಿ ನೀಡುವ ಸರ್ವಪಕ್ಷ ನಿಯೋಗದ ಜತೆಗೆ ಪ್ರತ್ಯೇಕತಾವಾದಿಗಳ ಮಾತುಕತೆಗೆ ಮುಹೂರ್ತ ಫಿಕ್ಸ್ ಆಗಿದೆ.
ನಿಯೋಗದ ಯಾವ ಸದಸ್ಯರೂ ಪ್ರತ್ಯೇಕತಾವಾದಿ ಮುಖಂಡರ ಜತೆ ಮಾತುಕತೆ ನಡೆಸಲು ನಿರ್ಬಂಧ ವಿಧಿಸಬಾರದು ಎಂಬ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನಡುವೆ ನಡೆದ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಐವತ್ತು ದಿನಗಳಿಂದ ಕರ್ಫ್ಯೂ ನೆರಳಲ್ಲಿರುವ ಕಣಿವೆ ರಾಜ್ಯದಲ್ಲಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಪ್ರತ್ಯೇಕತಾವಾದಿಗಳ ಜತೆ ಮಾತುಕತೆ ನಡೆಸುವುದು ಅನಿವಾರ್ಯ ಎಂಬ ನಿರ್ಧಾರಕ್ಕೆ ಸರ್ಕಾರಗಳು ಬಂದಿವೆ ಎನ್ನಲಾಗಿದೆ. ಕಳೆದ ತಿಂಗಳು ಬುರ್ಹಾನ್ ವಾನಿ ಹತ್ಯೆ ಬಳಿಕ ಭುಗಿಲೆದ್ದ ಹಿಂಸಾಚಾರದಲ್ಲಿ 70ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.
"ಪ್ರಧಾನಿ ಮೋದಿ ಜತೆಗಿನ ಭೇಟಿ ಮೆಹಬೂಬಾಗೆ ವಿಶ್ವಾಸ ಮೂಡಿಸಿದೆ. ರಾಜ್ಯ ಸರ್ಕಾರದ ಜತೆ ಕೇಂದ್ರ ಸದಾ ಇರುತ್ತದೆ ಎಂದು ಮೋದಿ ಭರವಸೆ ನೀಡಿದ್ದಾರೆ" ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಜುಲೈ 9ರಂದು ಸಮಸ್ಯೆ ಉದ್ಭವಿಸಿದ ಬಳಿಕ ಇದು ಮುಫ್ತಿ- ಮೋದಿ ನಡುವಿನ ಮೊದಲ ಭೇಟಿ.
ರಾಜ್ಯ ಸರ್ಕಾರವನ್ನು ಉಳಿಸುವ ಸಲುವಾಗಿ ಪ್ರತ್ಯೇಕತಾವಾದಿಗಳು ಹಿಂಸೆ ತೊರೆಯಬೇಕು ಎಂದು ಮುಫ್ತಿ ಮನವಿ ಮಾಡಿದ್ದರು. ಪ್ರತ್ಯೇಕತಾವಾದಿ ಮುಖಂಡ ಸೈಯದ್ ಅಲಿ ಗೀಲಾನಿ, ಮೆಹಬೂಬಾ ಅವರನ್ನು ಮಗಳಂತೆ ಪರಿಗಣಿಸಿ, ಆಕೆಗೆ ಅವಕಾಶ ಕಲ್ಪಿಸಬೇಕು ಎಂದು ಪಿಡಿಪಿ ಮನವಿ ಮಾಡಿತ್ತು.