ಪತ್ನಿಯ ಶವ ಹೊತ್ತವನಿಗೆ ಆಕೆಯ ಅಂತಿಮ ಸಂಸ್ಕಾರ ಮಾಡಲು ಬಿಡದ ಸರಕಾರಿ ಅಧಿಕಾರಿಗಳು
ಕಾಳಹಂದಿ, ಆ.28: ಪತ್ನಿಯ ಶವವನ್ನು ಸಾಗಿಸಲು ಶವಸಾಗಾಟ ವಾಹನವನ್ನೂ ನೀಡದೇ ಅಮಾನವೀಯತೆ ಮೆರೆದ ಒಡಿಶಾ ಅಧಿಕಾರಿಗಳು ಇದೀಗ ಮತ್ತೊಮ್ಮೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಹತ್ತು ಕಿಲೋಮೀಟರ್ ದೂರ ಹೆಗಲ ಮೇಲೆ ಪತ್ನಿಯ ಶವ ಹೊತ್ತೇ ಕಾಲ್ನಡಿಗೆಯಲ್ಲಿ ತೆರಳಿದ್ದ ದಾನಾ ಮಾಂಝಿ ಅವರಿಗೆ ತಮ್ಮ ಪತ್ನಿಯ ಅಂತ್ಯ ಸಂಸ್ಕಾರಕ್ಕೂ ಅವಕಾಶ ನೀಡಿದೇ, ವಿಚಾರಣೆಗಾಗಿ ಅವರನ್ನು ಕರೆದೊಯ್ದ ಘಟನೆ ಬೆಳಕಿಗೆ ಬಂದಿದೆ. ಪತ್ನಿಯ ಶವವನ್ನು ಹೆಗಲಲ್ಲಿ ಹೊತ್ತೊಯ್ಯುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹಬ್ಬಿದ್ದು, ಈ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.
ಅಧಿಕಾರಿಗಳ ಈ ಅಮಾನವೀಯ ಕ್ರಮದಿಂದಾಗಿ ಮಾಂಝಿ ಅಂತ್ಯಸಂಸ್ಕಾರವನ್ನು ಅನಿವಾರ್ಯವಾಗಿ ಮುಂದೂಡಬೇಕಾಯಿತು. "ಅಂತ್ಯಸಂಸ್ಕಾರ ನೆರವೇರಿಸಲೂ ಅವಕಾಶ ನೀಡದೇ, ನನ್ನನ್ನು ವಿಚಾರಣೆಗೆ ಕರೆದೊಯ್ದರು" ಎಂದು ಮಾಂಝಿ ಹೇಳಿದ್ದಾರೆ.
ದಿನವಡೀ ಮಾಂಝಿ ಹಾಗೂ 12 ವರ್ಷದ ಮಗಳನ್ನು ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಕರೆದೊಯ್ದು, ಮಾಧ್ಯಮದ ಮುಂದೆ ಏನು ಹೇಳಬೇಕು ಎಂದು ಬೋಧನೆ ಮಾಡಿದರು. ಕೊನೆಗೆ ಸಾವಿರ ರೂಪಾಯಿಯ ಐದು ಗರಿಗರಿ ನೋಟನ್ನು ಪರಿಹಾರವಾಗಿ ನೀಡಲಾಯಿತು. ಒಂದು ಪತ್ರಕ್ಕೆ ನನ್ನಿಂದ ಸಹಿ ಮಾಡಿಸಿಕೊಂಡಿದ್ದು, ಅದರಲ್ಲಿ ಏನು ಬರೆದಿದೆ ಎನ್ನುವುದು ತಿಳಿಯದು ಎಂದೂ ಮಾಂಝಿ ವಿವರಿಸಿದ್ದಾರೆ.