×
Ad

ಇದು ನಿಮಗೆ ಗೊತ್ತೇ?: ಸಂಸತ್ತಿನ ಮೇಲೆ ಮೊದಲ ದಾಳಿ ನಡೆದದ್ದು ಗೋರಕ್ಷಕರಿಂದ!

Update: 2016-08-28 13:13 IST

ಹೊಸದಿಲ್ಲಿಯಲ್ಲಿರುವ ಸಂಸತ್ ಭವನದ ಮೇಲೆ 2001ರಲ್ಲಿ ಒಂಬತ್ತು ಮಂದಿ ಲಷ್ಕರ್ ಎ ತೊಯ್ಬ ಹಾಗೂ ಜೈಶ್ ಎ ಮೊಹ್ಮದ್ ಉಗ್ರರು ದಾಳಿ ನಡೆಸಿದ್ದು ಎಲ್ಲರಿಗೂ ತಿಳಿದ ವಿಚಾರ. ಆದರೆ ಬಹುತೇಕ ಮಂದಿಯ ಗಮನಕ್ಕೆ ಬಾರದ ವಿಚಾರವೆಂದರೆ, ಇದು ಭಾರತದ ಸಂಸತ್ತಿನ ಮೇಲೆ ನಡೆದ ಎರಡನೆ ದಾಳಿ ಎನ್ನುವುದು. ಇದಕ್ಕೂ ಮುನ್ನ 1966ರಲ್ಲಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ, ನಗ್ನ ನಾಗಾ ಸಾಧುಗಳ ಒಂದು ಗುಂಪು ಸಂಸತ್ ಭವನದ ಮೇಲೆ ದಾಳಿ ಪ್ರಯತ್ನ ಮಾಡಿತ್ತು. ದೇಶಾದ್ಯಂತ ಗೋಹತ್ಯೆ ನಿಷೇಧಿಸಬೇಕು ಎಂದು ಆಗ್ರಹಿಸಿ ಈ ದಾಳಿ ಪ್ರಯತ್ನ ನಡೆಸಿದ್ದರು. ಪ್ರತಿಭಟನಾಕಾರರು ಒಬ್ಬ ಪೊಲೀಸ್‌ನನ್ನು ಹತ್ಯೆ ಮಾಡಿದ್ದರು. ಪ್ರತಿಯಾಗಿ ನಡೆದ ಪೊಲೀಸ್ ಗುಂಡಿನ ದಾಳಿಯಲ್ಲಿ ಏಳು ಮಂದಿ ಗೋರಕ್ಷಕರು ಬಲಿಯಾಗಿದ್ದರು.
ಆದರೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಈ ಒತ್ತಡ ತಂತ್ರಕ್ಕೆ ಮಣಿಯದೇ, ಗೋಹತ್ಯೆ ನಿಷೇಧಕ್ಕೆ ನಿರಾಕರಿಸಿದ್ದರು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷ ಬಳಿಕವೂ ಇದೇ ಪರಿಸ್ಥಿತಿಗೆ ಅಂಟಿಕೊಂಡಿರಬೇಕಾಗಿದೆ.
1966ರಲ್ಲಿ ಸರ್ವದಲೀಯ ಗೋರಕ್ಷಾ ಮಹಾಭಿಯಾನ ಸಮಿತಿ ನವೆಂಬರ್ 7ರಂದು ಸಾಮೂಹಿಕ ಸತ್ಯಾಗ್ರಹಕ್ಕೆ ಕರೆ ನೀಡಿತು. ಪ್ರಭುದತ್ತ ಬ್ರಹ್ಮಚಾರಿ ಸಮಿತಿಯ ಅಧ್ಯಕ್ಷತೆ ವಹಿಸಿದ್ದರು. ಗಾಂಧಿ ಅನುಯಾಯಿಯಾಗಿ ರಾಜಕೀಯ ಸೇರಿದ ಈ ಸ್ವಾತಂತ್ರ್ಯ ಹೋರಾಟಗಾರ ಕೊನೆಗೆ ಅಲಹಾಬಾದ್ ಬಳಿ ಆಶ್ರಮ ನಿರ್ಮಿಸಿಕೊಂಡು ಧಾರ್ಮಿಕ ಗುರುವಾದರು. 1951ರ ಸಾರ್ವತ್ರಿಕ ಚುನಾವಣೆಯಲ್ಲಿ ಆರ್‌ಎಸ್‌ಸ್ ಬೆಂಬಲದೊಂದಿಗೆ ನೆಹರೂ ವಿರುದ್ಧ ಸ್ಪರ್ಧಿಸಿದರು. ಹಿಂದೂ ಸಂಹಿತೆ ಮಸೂದೆಗೆ ವಿರೋಧ ಹಾಗೂ ಗೋಸಂರಕ್ಷಣೆ ಇವರ ಪ್ರಮುಖ ನೆಲೆಗಟ್ಟಾಗಿತ್ತು.
 ನವೆಂಬರ್ 7ರ ಸತ್ಯಾಗ್ರಹದಲ್ಲಿ ಸುಮಾರು ಏಳು ಲಕ್ಷ ಮಂದಿ ಪಾಲ್ಗೊಂಡಿದ್ದರು ಎಂದು ಕೆಲವರು ಹೇಳುತ್ತಾರೆ. ಸಂಸತ್ ಭವನದ ಹೊರಗೆ ಜಮಾವಣೆಗೊಂಡ ತ್ರಿಶೂಲಧಾರಿ ಸಾಧುಗಳು, ಸಂಸತ್ ಭವನ ಸಂಕೀರ್ಣಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರು. ಬಳಿಕ ಅಂದಿನ ಗೃಹಸಚಿವರಾಗಿದ್ದ ಗುಲ್ಜಾರಿಲಾಲ್ ನಂದಾ ಅವರನ್ನು ಪ್ರಧಾನಿ ಇಂದಿರಾಗಾಂಧಿ ತರಾಟೆಗೆ ತೆಗೆದುಕೊಂಡು, ಸಾಧುಗಳನ್ನು ಸಂಸತ್ ಸಂಕೀರ್ಣಕ್ಕೆ ಬರಲು ಅವಕಾಶ ಮಾಡಿಕೊಟ್ಟ ಕ್ರಮವನ್ನು ಪ್ರಶ್ನಿಸಿದ್ದರು. ನಂದಾ ಗೋಹತ್ಯೆ ನಿಷೇಧಕ್ಕೆ ಮೊದಲು ಬೆಂಬಲ ಸೂಚಿಸಿದ್ದ ಹಿನ್ನೆಲೆಯಲ್ಲಿ ನಂದಾ ಪಾತ್ರದ ಬಗ್ಗೆಯೇ ಅನುಮಾನ ಹುಟ್ಟಿಕೊಂಡಿತ್ತು.
ಮುಂದೆ ಇದಕ್ಕಾಗಿ ಕಾಂಗ್ರೆಸ್ ಪಕ್ಷ ಬೆಲೆ ತೆರಬೇಕಾಯಿತು. 1966ರ ಸಂಸತ್ ದಾಳಿಯನ್ನು ಜನಸಂಘ, ಚುನಾವಣಾ ಸಂದೇಶವಾಗಿ ಬಳಸಿಕೊಂಡಿತು. ಕಾಂಗ್ರೆಸ್ ಪಕ್ಷ ಗೋಹತ್ಯೆ ನಿಷೇಧಕ್ಕೆ ವಿರುದ್ಧವಾಗಿರುವುದಲ್ಲದೇ, ಗೋರಕ್ಷಕರ ಮೇಲೆ ಗುಂಡು ಹಾರಿಸಿತು ಎಂದು ಪ್ರಚಾರ ಮಾಡಿತು. ಇದರಿಂದ 1967ರಲ್ಲಿ ಜನಸಂಘದ ಸ್ಥಾನಗಳ ಸಂಖ್ಯೆ 14ರಿಂದ 35ಕ್ಕೆ ಹೆಚ್ಚಿತು.

ಕೃಪೆ : scroll.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News