ಪದಗಳ ಬಳಕೆ ಬಗ್ಗೆ ಎಚ್ಚರ ಇರಲಿ: ಯುವ ಬರಹಗಾರರಿಗೆ ನಾ.ದಾಮೋದರ ಶೆಟ್ಟಿ ಸಲಹೆ
ಮಂಗಳೂರು, ಆ.28: ಬರವಣಿಗೆಯಲ್ಲಿ ಶಬ್ದಗಳ ಬಗ್ಗೆ ಎಚ್ಚರ ಮತ್ತು ಅದರ ಸೂಕ್ಷ್ಮತೆಯನ್ನು ಅರಿತುಕೊಳ್ಳಬೇಕೆಂದು ಸಾಹಿತಿ ನಾ.ದಾಮೋದರ ಶೆಟ್ಟಿ ಉದಯೋನ್ಮುಖ ಬರಹಗಾರರಿಗೆ ಸಲಹೆ ನೀಡಿದ್ದಾರೆ.
ಅವರು ಕೆ.ಎಂ.ಅಭಿಮಾನಿ ಬಳಗದ ವತಿಯಿಂದ ನಗರದ ನಲಪಾಡ್ ರೆಸಿಡೆನ್ಸಿಯಲ್ಲಿ ಇಂದು ಬೆಳಗ್ಗೆ ನಡೆದ ‘ಬರಹ ಕಮ್ಮಟ-2016’ ನೂರುಲ್ ಉಲಮಾ ಸಾಹಿತ್ಯ ಪುರಸ್ಕಾರ ಹಾಗೂ ಪೆನ್ ಫ್ರೆಂಡ್ಸ್ ಸಾಹಿತ್ಯ ವೇದಿಕೆ ಚಾಲನಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಯುವ ಬರಹಗಾರರು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಭಾಷೆಯಲ್ಲಿ ಹಿಡಿತವಿರಬೇಕು. ಶಬ್ದವನ್ನು ಬಳಸುವಾಗ ಎಚ್ಚರಿಕೆ ಮತ್ತು ಸೂಕ್ಷ್ಮತೆಯನ್ನು ಅರಿತುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರೆಸ್‌ಕ್ಲಬ್ ಅಧ್ಯಕ್ಷ ರೊನಾಲ್ಡ್ ಅನಿಲ್ ಫೆರ್ನಾಂಡಿಸ್, ವಾರ್ತಾಧಿಕಾರಿ ಖಾದರ್ ಶಾ, ಕರ್ನಾಟಕ ಕಲ್ಚರಲ್ ಫೌಂಡೇಶನ್‌ನ ಅಂತಾರಾಷ್ಟ್ರೀಯ ಅಧ್ಯಕ್ಷ ಎಸ್.ಪಿ.ಹಂಝ ಸಖಾಫಿ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ರಫೀಕ್ ಮಾಸ್ಟರ್, ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಮುಸ್ಲಿಂ ಜಮಾಅತ್ ಕೌನ್ಸಿಲ್‌ನ ದ.ಕ. ಜಿಲ್ಲಾಧ್ಯಕ್ಷ ಹೈದರ್ ಪರ್ತಿಪ್ಪಾಡಿ, ರಾಜ್ಯ ಉಲಮಾ ಒಕ್ಕೂಟದ ಕಾರ್ಯದರ್ಶಿ ಯು.ಕೆ.ಮುಹಮ್ಮದ್ ಸಅದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಪರಾಹ್ನ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವ ಯು.ಟಿ.ಖಾದರ್ ಅವರು ‘ನೂರುಲ್ ಉಲಮಾ ಸಾಹಿತ್ಯ ಪುರಸ್ಕಾರ’ ಪ್ರಶಸ್ತಿ ಪ್ರದಾನ ಮಾಡಿದರು.