ನವರಾತ್ರಿ ವೇಷ: ಸಾರ್ವಜನಿಕರಿಗೆ ತೊಂದರೆಯ ಬಗ್ಗೆ ದೂರು ಬಂದಲ್ಲಿ ಕ್ರಮ; ಡಿಸಿಪಿ

Update: 2016-08-28 09:07 GMT

ಮಂಗಳೂರು, ಆ.28: ನವರಾತ್ರಿ ಸೇರಿದಂತೆ ಹಬ್ಬ ಹರಿದಿನಗಳ ಸಂದರ್ಭ ವೇಷ ಹಾಕಿ ಕಾರ್ಯಕ್ರಮ ನೀಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬಂದಲ್ಲಿ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಉಪ ಆಯುಕ್ತ (ಡಿಸಿಪಿ)ಶಾಂತರಾಜು ಸ್ಪಷ್ಟಪಡಿಸಿದ್ದಾರೆ. ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ನಡೆದ ಮಾಸಿಕ ದಲಿತರ ಕುಂದುಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. 

ನವರಾತ್ರಿ ಹಾಗೂ ಹಬ್ಬಗಳ ಸಂದರ್ಭ ವೇಷ ಹಾಕಿ ಮನೆ ಮನೆಗಳಲ್ಲಿಯೂ ತಡರಾತ್ರಿ ಹೊತ್ತಿನಲ್ಲೂ ಕುಣಿಯುವುದರಿಂದ ರೋಗಿಗಳು, ಮಕ್ಕಳು ಹಾಗೂ ವಯೋವೃದ್ಧರಿಗೆ ತೊಂದರೆಯಾಗುತ್ತದೆ. ಈ ಬಗ್ಗೆ ವೇಷ ಹಾಕುವವರಿಗೆ ಇಂತಿಷ್ಟು ಸಮಯಾವಧಿಯನ್ನು ನಿಗದಿಪಡಿಸಬೇಕು ಎಂದು ದಲಿತ ಮುಖಂಡ ಈಶ್ವರ್ ಎಂಬವರು ಸಭೆಯಲ್ಲಿ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ, ಆ ರೀತಿಯಲ್ಲಿ ಸಮಯವನ್ನು ನಿಗದಿಪಡಿಸಲು ಸಾಧ್ಯವಿಲ್ಲವಾಗಿದ್ದರೂ ಈ ರೀತಿ ವೇಷ ಹಾಕಿ ಇತರರಿಗೆ ತೊಂದರೆ ನೀಡುವ, ಆಸ್ಪತ್ರೆ ಹಾಗೂ ಮನೆಗಳ ಅಕ್ಕಪಕ್ಕ ಇತರರಿಗೆ ತೊಂದರೆಯಾಗುವ ರೀತಿಯ ಪ್ರಕರಣಗಳ ಬಗ್ಗೆ ಪೊಲೀಸ್ ಇಲಾಖೆಯ ಗಮನಕ್ಕೆ ತಂದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ಪರ್ಸನಲ್ ಲೋನ್ ಹೆಸರಿನಲ್ಲಿ ವಂಚನೆ: ದೂರು

 ಖಾಸಗಿ ಹಣಕಾಸು ಸಂಸ್ಥೆಯೊಂದು ಏಜೆನ್ಸಿ ಮೂಲಕ ಮೂರು ದಿನಗಳಲ್ಲಿ ಪರ್ಸನಲ್ ಲೋನ್ ಕೊಡುವುದಾಗಿ ಹೇಳಿ ದಾಖಲೆ ಪತ್ರಗಳಿಗೆ ಸಹಿ ಹಾಕಿಸಿಕೊಂಡು ಒಂದು ತಿಂಗಳಾದರೂ ಹಣ ನೀಡದೆ, ಅದರ ಸಿಬ್ಬಂದಿಯೇ ಹಣವನ್ನು ಪಡೆದುಕೊಂಡು ಬಳಿಕ ಸಹಿ ಹಾಕಿದ ವ್ಯಕ್ತಿಗೆ ಸಾಲ ಪಾವತಿಸಲು ನೋಟಿಸ್ ನೀಡಿ ಬೆದರಿಕೆ ಹಾಕುವಂತಹ ಪ್ರಕರಣಗಳು ನಡೆದಿವೆ. ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಸಾಕಷ್ಟು ದೂರುಗಳನ್ನು ನೀಡಲಾಗಿದೆ. ಇತ್ತೀಚೆಗೆ ಕಿರಣ್ ಕುಮಾರ್ ಎಂಬವರಿಗೂ ಇದೇ ರೀತಿ ಮೋಸವಾಗಿದೆ. ಈ ಬಗ್ಗೆ ದೂರು ನೀಡಲಾಗಿದೆ ಎಂದು ದಲಿತ ನಾಯಕ ಎಸ್.ಪಿ. ಆನಂದ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಡಾ. ಸಂಜೀವ ಪಾಟೀಲ್, ಈ ಬಗ್ಗೆ ಪ್ರಕರಣ ದಾಖಲಾಗಿರುವುದರಿಂದ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಿಸಿ ಕ್ಯಾಮರಾದ ಮೂಲಕ ದಿನಕ್ಕೆ 30ರಷ್ಟು ಪ್ರಕರಣಗಳು ದಾಖಲು

ನಗರದಲ್ಲಿ ಕೆಲವೆಡೆ ಸಿಸಿ ಕ್ಯಾಮರಾಗಳನ್ನು ಅಳವಡಿಕೆ ಮಾಡಲಾಗಿದ್ದರೂ ಅವುಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದಾಗಿ ದಲಿತ ನಾಯಕರ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಶಾಂತರಾಜು, ಹೆಲ್ಮೆಟ್ ಧರಿಸದೆ ವಾಹನ ಚಲಾವಣೆ, ಸಂಚಾರಿ ನಿಯಮ ಉಲ್ಲಂಘನೆಗೆ ಸಂಬಂಧಿಸಿ ದಿನವೊಂದಕ್ಕೆ ಸರಾಸರಿ 30ರಂತೆ ಸಿಸಿ ಕ್ಯಾಮರಾಗಳ ಮೂಲಕ ವಾಹನ ನಂಬರ್ ನೋಟ್ ಮಾಡಿ ಪ್ರಕರಣ ದಾಖಲಿಸಿ, ನೋಟಿಸ್ ನೀಡಲಾಗುತ್ತಿದೆ ಎಂದರು. ದೇಶಾದ್ಯಂತ ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ಹಿನ್ನೆಲೆಯಲ್ಲಿ ದಲಿತರ ಕಾಲನಿಯ ಪ್ರಮುಖ ಕ್ರಾಸ್‌ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂಬ ಆಗ್ರಹ ವ್ಯಕ್ತವಾಯಿತು.

ಇದಕ್ಕೆ ಸ್ಪಂದಿಸಿದ ಡಿಸಿಪಿ ಶಾಂತರಾಜು, ಪೊಲೀಸ್ ಇಲಾಖೆಯಿಂದ ಈಗಾಗಲೇ ನಗರದ ಆಯಾಕಟ್ಟಿನ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಕಾರ್ಯ ನಡೆಯುತ್ತಿದೆ. ಉಳಿದಂತೆ ಪ್ರಮುಖ ಸ್ಥಳಗಳಲ್ಲಿ ಮಹಾನಗರ ಪಾಲಿಕೆಯ ವತಿಯಿಂದ ಸಿಸಿ ಕ್ಯಾಮರಾ ಅಳವಡಿಸಲು ಕೋರಲಾಗುವುದು ಎಂದು ಹೇಳಿದರು.

ಮಾದಕ ದ್ರವ್ಯಗಳ ಕುರಿತಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದಲಿತ ನಾಯಕರು ಯಾವುದೇ ಶಾಲೆಗಳಲ್ಲಿ ಮಾಹಿತಿ ನೀಡಲು ಕರೆಸಿದ್ದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಅದಕ್ಕೆ ಸದಾ ಸಿದ್ಧರಿರುತ್ತಾರೆ ಎಂದು ಡಿಸಿಪಿ ಹೇಳಿದರು.

ಕಾವೂರಿನ ಡಿಸಿ ಮನ್ನಾ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮಂಜೂರಾತಿ ದೊರಕಿದ್ದರೂ ಅಲ್ಲಿ ಮೇಯರ್ ಅವರ ಅನುಮೋದನೆಯಲ್ಲಿ ಶೌಚಾಲಯ ನಿರ್ಮಾಣವಾಗುತ್ತಿದೆ ಎಂಬ ದೂರಿಗೆ ಪ್ರತಿಕ್ರಿಯಿಸಿದ, ಡಿಸಿಪಿ ಅದು ಸಿವಿಲ್ ಪ್ರಕರಣವಾಗಿರುವುದರಿಂದ ಕಾಗದಪತ್ರಗಳ ಬಗ್ಗೆ ಕಾನೂನು ಸಲಹೆ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಟಿಂಟ್ ಪೇಪರ್ 1,001, ಕರ್ಕಶ ಹಾರ್ನ್ 2,406 ಪ್ರಕರಣ ದಾಖಲು
 ಕಾರಿನ ಗಾಜುಗಳಿಗೆ ಟಿಂಟ್ ಅಳವಡಿಕೆಯನ್ನು ತೆರವುಗೊಳಿಸುವ ಕುರಿತಂತೆ ಹಲವು ಸಮಯಗಳಿಂದ ಒತ್ತಾಯಿಸಲಾಗುತ್ತಿದ್ದರೂ ಕ್ರಮವಾಗುತ್ತಿಲ್ಲ ಎಂಬ ದಲಿತ ನಾಯಕರೊಬ್ಬರ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಶಾಂತರಾಜು, 2016ರ ಜನವರಿಯಿಂದ ಈವರೆಗೆ ಕಾರಿನ ಗಾಜುಗಳಿಗೆ ಟಿಂಟ್ ಪೇಪರ್ ಅಳವಡಿಕೆಗೆ ಸಂಬಂಧಿಸಿ 1,001 ಪ್ರಕರಣಗಳು ಹಾಗೂ ಕರ್ಕಶ ಹಾರ್ನ್‌ಗಳಿಗೆ ಸಂಬಂಧಿಸಿ 2,406 ಪ್ರಕರಣಗಳನ್ನು ದಾಖಲಿಸಿ ದಂಡ ವಸೂಲು ಮಾಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News