ಇನೋಳಿ ಜಮಾತ್ ಗ್ರೂಪ್‌ನಿಂದ ಶಿಕ್ಷಕರು, ಸಿಬ್ಬಂದಿಗೆ ಪುರಸ್ಕಾರ
ಕೊಣಾಜೆ, ಆ.28: 2015-16ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.85 ಫಲಿತಾಂಶ ದಾಖಲಿಸಲು ಶ್ರಮಿಸಿದ ಪಾವೂರು ಸರಕಾರಿ ಪ್ರೌಢಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಯನ್ನು ವಾಟ್ಸಾಪ್ ಮೂಲಕ ಆರಂಭಗೊಂಡಿರುವ ಇನೋಳಿ ಜಮಾತ್ ಗ್ರೂಪ್ ವತಿಯಿಂದ ಶನಿವಾರ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾ.ಪಂ., ಎಸ್‌ಡಿಎಂಸಿ ಅಧ್ಯಕ್ಷ ಮುಹಮ್ಮದ್ ಮೋನು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಅದನ್ನು ಅಧಿಕಾರ ಎಂದು ಭಾವಿಸಿ ಅಹಂಪಡುವ ಬದಲು ತನ್ನ ಕರ್ತವ್ಯ ಎಂದು ಭಾವಿಸಿ ಮನುಷ್ಯನಾದವನು ತನ್ನ ಬದುಕಿನಲ್ಲಿ ಇನ್ನೊಬ್ಬರ ಒಳಿತಿಗಾಗಿ ಕೆಲಸ ಮಾಡಬೇಕು. ಇನೋಳಿ ಜಮಾತ್ ಗ್ರೂಪ್ ಕೆಲಸದಿಂದ ವೈಯುಕ್ತಿಕ ಲಾಭವಿಲ್ಲದಿದ್ದರೂ ಊರಿನ ಶಾಲೆ ಅಭಿವೃದ್ಧಿ ತಮ್ಮ ಜವಾಬ್ದಾರಿಯಾಗಿ ಭಾವಿಸಿದ್ದು, ಇಂತಹ ನಿಸ್ವಾರ್ಥ ಸೇವೆಯಿಂದ ಊರಿನ ಅಭಿವೃದ್ಧಿ, ಸಮಾಜದಲ್ಲಿ ಸೌಹಾರ್ದ ಮೂಡಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಜಮಾತ್ ಗ್ರೂಪ್ ಸದಸ್ಯ ಮುಹಮ್ಮದ್ ಶರೀಫ್ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳೂ ಉನ್ನತ ಸ್ಥಾನಕ್ಕೇರಬೇಕು ಎನ್ನುವ ನೆಲೆಯಲ್ಲಿ ಶಾಲೆಗೆ ಬೇಕಾದ ಅಗತ್ಯ ವ್ಯವಸ್ಥೆಗಳನ್ನು ಮಾಡುವ ಕಾರ್ಯಕ್ಕೆ ಜಮಾತ್ ಗ್ರೂಪ್ ಮುಂದಡಿಯಿಟ್ಟಿದೆ. ಪಾವೂರು ಶಾಲೆಯಲ್ಲೂ ಕೆಲವು ಬೇಡಿಕೆಗಳಿದ್ದು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಲ್ಲದೆ, ಸರಕಾರಿ ಮಟ್ಟದಿಂದ ಆಗುವ ಕೆಲಸದ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಕಳೆದ ವರ್ಷ ಎಸೆಸೆಲ್ಸಿ ವಿದ್ಯಾರ್ಥಿಗಳ ವಿಶೇಷ ತರಗತಿಗಾಗಿ ಜಮಾತ್ ಗ್ರೂಪ್ ಸದಸ್ಯರು ಚಹಾ ತಿಂಡಿಯ ವ್ಯವಸ್ಥೆ ಮಾಡಿದ್ದಲ್ಲದೆ, ನಿರಂತರ ಸಂಪರ್ಕದಲ್ಲಿದ್ದರು. ಎಲ್ಲಾ ಕಡೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಫಲಿತಾಂಶ ಬಂದರೆ ಶಿಕ್ಷಕರನ್ನು ಪುರಸ್ಕರಿಸಲಾಗುತ್ತದೆ, ಆದರೆ ಇನೋಳಿ ಜಮಾತ್ ಗ್ರೂಪ್ ಶೇ.85 ಫಲಿತಾಂಶ ಬಂದಿರುವುದಕ್ಕೂ ಶಿಕ್ಷಕರನ್ನು ಪುರಸ್ಕರಿಸಿ ಮುಂದಿನ ದಿನಗಳಲ್ಲಿ ಜವಾಬ್ದಾರಿ ಹೆಚ್ಚಿಸಿದ್ದಾರೆ. ಶಿಕ್ಷಕರ ಜೊತೆ ಸಿಬ್ಬಂದಿಯನ್ನೂ ಪುರಸ್ಕರಿಸುವ ಮುಖಾಂತರ ಅವರ ಸೇವೆಯನ್ನೂ ಪ್ರೋತ್ಸಾಹಿಸಿರುವುದು ಶ್ಲಾಘನೀಯ ಎಂದು ಮುಖ್ಯ ಶಿಕ್ಷಕ ಪ್ರಶಾಂತ್ ಕುಮಾರ್ ಕೆ.ಎಸ್. ಹೇಳಿದರು.
ಸಭಾ ಕಾರ್ಯಕ್ರಮದ ಬಳಿಕ ಶಿಕ್ಷಕರು, ವಿದ್ಯಾರ್ಥಿಗಳ ಜೊತೆ ಜಮಾತ್ ಗ್ರೂಪ್ ಸದಸ್ಯರು ಶಾಲೆಗೆ ಅಗತ್ಯವಿರುವ ಸೇವೆ ಬಗ್ಗೆ ಚರ್ಚಿಸಿದರು. ಜಮಾತ್ ಗ್ರೂಪ್ ಸದಸ್ಯ ಇಸ್ಮಾಯೀಲ್ ಕಿಲ್ಲೂರು ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಮಾಜಿ ಸದಸ್ಯ ಎನ್.ಎಸ್.ಕರೀಂ, ಪಾವೂರು ಗ್ರಾಮ ಪಂಚಾಯತ್ ಸದಸ್ಯ ಐ.ಬಿ.ಸಾದಿಕ್, ಹಾರಿಸ್ ಕಲ್ಲಕಂಡ, ಫಾರೂಕ್ ಪೊರ್ಸೋಟ, ಇಮ್ತಿಯಾಝ್ ಇನೋಳಿ, ಅನ್ವರ್ ಹುಸೈನ್, ಐ.ಬಿ.ಮುಬಾರಕ್, ಫಾರೂಕ್ ಇನೋಳಿ, ಅಬ್ದುಲ್ ಸಲೀಂ ಮೊದಲಾದವರು ಉಪಸ್ಥಿತರಿದ್ದರು.