×
Ad

ಆಧುನಿಕ ಆಹಾರ ಪದ್ಧತಿಯಿಂದ ರೋಗಗಳ ಹೆಚ್ಚಳ: ಡಾ. ಖಾದರ್ ಕಳವಳ

Update: 2016-08-28 17:32 IST

ಮಂಗಳೂರು, ಆ. 28: ಆಧುನಿಕತೆ, ತಾಂತ್ರಿಕತೆಯ ಭರಾಟೆಯಲ್ಲಿ ಶಾಸ್ತ್ರೀಯ ಹಾಗೂ ನೈಸರ್ಗಿಕ ಆಹಾರ ಪದ್ಧತಿಯಿಂದ ದೂರವಾಗಿ ಅಸಹಜ ಆಹಾರಗಳನ್ನು ನಮ್ಮದಾಗಿಸಿಕೊಂಡಿರುವುದು ಇಂದು ಮನುಷ್ಯ ಇಂದು ವಿವಿಧ ರೋಗಗಳಿಗೆ ತುತ್ತಾಗಲು ಪ್ರಮುಖ ಕಾರಣ ಎಂದು ಎಂದು ಮೈಸೂರಿನ ಆಹಾರ, ಕೃಷಿ ಹಾಗೂ ಹೋಮಿಯೋ ತಜ್ಞ ಡಾ. ಎ. ಖಾದರ್ ಕಳವಳ ವ್ಯಕ್ತಪಡಿಸಿದ್ದಾರೆ.

ದೇಸಿ ಉತ್ಥಾನ ಸಾವಯವ ರೈತ ಬಂಧು ಟ್ರಸ್ಟ್ ಮಂಗಳೂರು ಹಾಗೂ ಆರೋಗ್ಯ ಭಾರತಿ ಮಂಗಳೂರು ವಿಭಾಗದ ಜಂಟಿ ಆಶ್ರಯದಲ್ಲಿ ಮಂಗಳೂರು ಪುರಭವನದಲ್ಲಿ ರವಿವಾರ ಆಯೋಜಿಸಲಾದ ‘ಅನ್ನದ ಬಟ್ಟಲಿಗೆ ಸಿರಿಧಾನ್ಯಗಳು’ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.

ನೈಸರ್ಗಿಕವಾದ ಆಹಾರ ಪದ್ಧತಿಯಿಂದ ದೂರವಾಗಿರುವ ಕಾರಣ, ಜನರನ್ನಿಂದು ಅಕಾಲಿಕವಾಗಿ ರಕ್ತಹೀನತೆ, ಕ್ಯಾಲ್ಸಿಯಂ ಕೊರತೆ, ಮಲ ಬದ್ದತೆ, ರಕ್ತದೊತ್ತಡ, ಸಕ್ಕರೆ ಕಾಯಿಲೆಗಳು ಕಾಡುತ್ತಿವೆ. ರಾಸಾಯನಿಕಗಳನ್ನೇ ಬಳಸಿ ಮಾಡುವ ಹಲವು ಆಹಾರ ಕ್ರಮಗಳು, ಪಾಶ್ಚಾತ್ಯ ಆಹಾರ ಪದ್ದತಿಗಳು ಜೀವನ ಕ್ರಮದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತಿದೆ ಎಂದು ಅವರು ಹೇಳಿದರು.

ರಾಸಾಯನಿಕ ಪರಿಣಾಮ ಬೀರುವ ನ್ಯಾನೋ ಉತ್ಪನ್ನ, ಪ್ಲಾಸ್ಟಿಕ್ ಬಾಟಲಿಗಳಲ್ಲಿ ದೊರೆಯುವ ನೀರು, ಎಣ್ಣೆ, ಹಾಲು ಸೇವಿಸುವುದರಿಂದ ನಮ್ಮ ದೇಹಕ್ಕೆ ಬೇಕಾದ ಸೂಕ್ಷ್ಮ ಪೋಷಕಾಂಶಗಳನ್ನು ಸೆಳೆಯುವ ಅಂಗಾಂಗಗಳು ಕಾರ್ಯನಿರ್ವಹಿಸದಂತಾಗಿ ನಮಗರಿವಿಲ್ಲದೇ ಅನೇಕ ರೋಗಗಳಿಗೆ ಆಹ್ವಾನವಿತ್ತುಕೊಂಡು ಸಮಸ್ಯೆ ಎದುರಾಗಿದೆ. ಜತೆಗೆ ಇಂದಿಗೂ ನಮ್ಮಲ್ಲಿ ವೈಜ್ಞಾನಿಕವಾಗಿ ಯಾರೂ ಕೂಡಾ ಆಹಾರವನ್ನು ನಿರ್ವಚನ ಮಾಡದಿರುವುದು ನಮ್ಮ ಇಂದಿನ ಅನಾರೋಗ್ಯ ಪರಿಸ್ಥಿತಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಿದರು.

ನಾವು ತಿನ್ನುವ ಮೊಟ್ಟೆ, ಕೋಳಿ, ಮೀನು ಮೊದಲಾದ ಮಾಂಸಗಳಲ್ಲಿ ರಾಸಾಯನಿಕ ವಸ್ತುಗಳು ಸಾಂದ್ರಿಕೃತಗೊಂಡಿರುತ್ತವೆ. ಭೂಮಿಯ ಮೇಲೆ ಇಂದು ಯಾವುದು ಸಹಜವಾಗಿ ಉಳಿದಿಲ್ಲ. ವೈದ್ಯಲೋಕ ಇಂದು ಮಾಯಾಲೋಕ, ಭ್ರಮಾಲೋಕವಾಗಿ ಮಾರ್ಪಟ್ಟಿದೆ. ವೈಜ್ಞಾನಿಕತೆಯ ಹೆಸರಲ್ಲಿ ವೌಡ್ಯತೆಗೆ ಒಳಗಾಗಿರುವ ವೈದ್ಯಲೋಕದಿಂದ ನಾವಿಂದು ಹೊರಬರಬೇಕಾಗಿದೆ. ಆರೋಗ್ಯ ಕಾಪಾಡಿಕೊಳ್ಳಲು ನಾರಿನಂಶದಿಂದ ಕೂಡಿದ ದವಸಧಾನ್ಯಗಳು, ನವಣೆಯಂತಹ ಕಾಳುಗಳು ಮಾತ್ರವೇ ಪರಿಪೂರ್ಣವಾದ ಆಹಾರ ಎಂದು ಡಾ. ಖಾದರ್ ನುಡಿದರು.

ವೈದ್ಯಕೀಯ ವ್ಯವಸ್ಥೆಯು ನಮ್ಮನ್ನು ಇನ್ನಷ್ಟು ರಾಸಾಯನಿಕ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ. ಸೌಖ್ಯವಿಲ್ಲದಾಗ ನೀಡುವ ಒಂದೊಂದು ಮಾತ್ರೆಗಳು, ಔಷಧಗಳು ದೇಹದ ಒಟ್ಟು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಗರ್ಭಧರಿಸಿದ ಸಂದರ್ಭದಲ್ಲಿ ಆಕೆಗೆ ವೈದ್ಯರು ನೀಡುವ ಔಷಧಿಗಳು ಹೊಟ್ಟೆಯಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಬದಲಾಗಿ ಆ ಸಂದರ್ಭ ಬೀಟ್‌ರೋಟ್, ಕ್ಯಾರೆಟ್, ನೆಲ್ಲಿಕಾಯಿ ತಿನ್ನುವಂತೆ ಬಹುತೇಕ ವೈದ್ಯರು ಸೂಚಿಸುವುದಿಲ್ಲ. ಬದಲಾಗಿ ಹುಟ್ಟುವ ಮಗುವಿಗೆ ರಾಸಾಯನಿಕಗಳ ಸ್ಪರ್ಶವನ್ನು ಹೊಟ್ಟೆಯೊಳಗಿನಿಂದಲೇ ಆರಂಭಿಸುವ ವ್ಯವಸ್ಥೆ ನಮ್ಮಲ್ಲಿರುವುದು ದುರಂತ ಎಂದವರು ಹೇಳಿದರು. ಕಳೆದ 50 ವರ್ಷಗಳಿಂದೀಚೆಗೆ ವಿವಿಧ ರೀತಿಯ ರೋಗಗಳು ಹೆಚ್ಚಾಗುತ್ತಿರಲು, ಬಾಲ್ಯದಲ್ಲೇ ರಕ್ತದೊತ್ತಡ, ಮಧಮೇಹದಂತಹ ರೋಗಗಳು ಕಾಡುತ್ತಿರಲು ಪ್ರಮುಖ ಕಾರಣ ರಕ್ತದಲ್ಲಿ ಗ್ಲೋಕೋಸ್ ನಿಯಂತ್ರಣ ಇಲ್ಲದಿರುವುದಾಗಿದೆ. ಪ್ರಕೃತಿಯೆಡೆಗೆ ಕಣ್ಣುಹಾಯಿಸಿದಾಗ ಮಾತ್ರವೇ ಆರೋಗ್ಯದಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ ಎಂದರು.

ಆರೋಗ್ಯಭಾರತಿ ಪ್ರಾಂತ ಕೋಶಾಧ್ಯಕ್ಷ ಡಾ. ಪ್ರತಾಪಕುಮಾರ ಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ಆರೋಗ್ಯ ಭಾರತಿ ಅಧ್ಯಕ್ಷ ಡಾ. ಈಶ್ವರ ಭಟ್, ಆಯುಷ್ ಫೌಂಡೇಶನ್‌ನ ಅಧ್ಯಕ್ಷೆ ಡಾ.ಆಶಾಜ್ಯೋತಿ ರೈ, ದೇಸಿ ಉತ್ಥಾನ ಸಾವಯವ ರೈತಬಂಧು ಟ್ರಸ್ಟ್ ಮುಖ್ಯಸ್ಥ ರಾಮಕೃಷ್ಣ ಭಟ್ ಮೈರುಗ, ಆಡಳಿತ ಟ್ರಸ್ಟಿ ಡಾ.ರಾಜೇಶ್ ಪಾದೆಕಲ್ಲು ಮುಂತಾದವರು ಉಪಸ್ಥಿತರಿದ್ದರು.

ಸೂರಜ್ ಪ್ರಾರ್ಥಿಸಿದರು. ಡಾ. ರಾಜೇಶ್ ಸ್ವಾಗತಿಸಿದರು.

ಹಾಲಿನಿಂದ ಹಾಲಾಹಲ ಸೃಷ್ಟಿ!

ಅಮೆರಿಕದಲ್ಲಿ 8ರ ಹರೆಯದಲ್ಲಿಯೇ ಬಾಲಕಿಯರು ಮುಟ್ಟಾಗುತ್ತಿದ್ದಾರೆ. ಈ ಬಗ್ಗೆ ಅಧ್ಯಯನ ನಡೆಸಿದಾಗ, ಗಂಭೀರ ವಿಚಾರ ಬಹಿರಂಗಗೊಂಡಿತು. ರಾಸಾಯನಿಕ ಪದಾರ್ಥಗಳನ್ನು ದನಗಳಿಗೆ ಚುಚ್ಚಿಸಿ ಅದರ ಮೂಲಕ ಹಾಲಿನ ಇಳುವರಿಯನ್ನು ಹೆಚ್ಚಿಸುವ ಪರಿಕಲ್ಪನೆಯನ್ನು ಅಮೆರಿಕದಲ್ಲಿ ಮಾಡಿದ ಪರಿಣಾಮ, ರಾಸಾಯನಿಕ ಪೂರಿತ ಹಾಲು ಕುಡಿಯುವ ಮಕ್ಕಳ ಹಾರ್ಮೊನುಗಳು ಬೇಗನೆ ಪ್ರತಿಕ್ರಿಯಿಸಿ ಬೇಗ ಮುಟ್ಟಾಗುವಂತಾಗಿದೆ. ಆಶ್ಚರ್ಯವೆಂದರೆ 8 ವರ್ಷದಲ್ಲಿ ಮುಟ್ಟಾಗುವ ಪರಿಸ್ಥಿತಿ ಈಗ ಭಾರತಕ್ಕೂ ಕಾಲಿಟ್ಟಿದೆ. ಹಾಲು ಹಾಲಾಹಲವನ್ನು ಸೃಷ್ಟಿಸುತ್ತಿದೆ. ಬಯೋಟೆಕ್ನಾಲಜಿ ನೆಪದಲ್ಲಿ ಹಾಲನ್ನು ಹಾಲಾಹಲವಾಗಿ ಮಾಡಿ ಮಕ್ಕಳ ಬಾಯಿಗೆ ಹಾಕಿದ ಘನತೆ ಮಾನವಕುಲಕ್ಕೆ ಶಾಪವಾಗುತ್ತಿದೆ ಎಂದು ಡಾ. ಎ. ಖಾದರ್ ವಿಶ್ಲೇಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News