ಸಂವೇದನಾಶೀಲತೆಯ ಕೊರತೆ ಅಸಹಿಷ್ಣುತೆಗೆ ಕಾರಣ: ಡಾ.ಅರವಿಂದ ಮಾಲಗತ್ತಿ

Update: 2016-08-28 12:23 GMT

ಮಂಗಳೂರು, ಆ.28:ಸಂವೇದನಾ ಶೀಲತೆಯ ಕೊರತೆ ಅಸಹಿಷ್ಣುತೆಗೆ ಕಾರಣವಾಗಿದೆ. ಸಂವೇದನೆ ಇರುವ ಬದುಕು ಸಹಿಷ್ಣುತೆಯನ್ನು ಕಾಪಾಡುತ್ತದೆ. ದಲಿತ ಸಾಹಿತ್ಯ ಸಂವೇದನೆಗಳಿಂದ ಕೂಡಿದ ಬದುಕಿನ ಅನಾವರಣವಾಗಿದೆ ಎಂದು ಖ್ಯಾತ ಲೇಖಕ ಡಾ.ಅರವಿಂದ ಮಾಲಗತ್ತಿ ತಿಳಿಸಿದ್ದಾರೆ.

ಅವರು ಇಂದು ನಗರದ ಸಂತ ಅಲೋಶಿಯಸ್ ಕಾಲೇಜಿನ ಎರಿಕ್ ಮಥಾಯಸ್ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಡಿವೈಎಫ್‌ಐ, ಸಾಹಿತ್ಯ ಸಮುದಾಯ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡ ‘ಕನ್ನಡ ಆತ್ಮಕತೆಗಳಲ್ಲಿ ದಲಿತ ಸಂವೇದನೆ’ ಎಂಬ ವಿಷಯದ ಕುರಿತ ಎರಡು ದಿನಗಳ ವಾಚನಾಭಿರುಚಿ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.

ನವ್ಯ, ನವೋದಯ, ಪ್ರಗತಿಶೀಲ ಸಾಹಿತ್ಯ ಪ್ರಕಾರಗಳಿಗಿಂತ ಹೆಚ್ಚಾಗಿ ದಲಿತ ಬಂಡಾಯ ಸಾಹಿತ್ಯ ರಚನೆಗಳು ಬದುಕಿನ ಸಂವೇದನೆಗಳನ್ನು ಹೊಂದಿದೆ. ದಲಿತ ಎನ್ನುವುದು ಒಂದು ಆಲೋಚನಾ ಕ್ರಮ. ಅದೊಂದು ಚಲನ ಶೀಲ ಸಾಹಿತ್ಯದ ಪ್ರತೀಕವಾಗಿದೆ. ಸಾಹಿತ್ಯದಲ್ಲಿ ಜಾತಿ ಆಧಾರದಲ್ಲಿ ದಲಿತ ಸಾಹಿತ್ಯವನ್ನು ಪರಿಗಣಿಸಿ ಇನ್ನೊಂದು ಹೊಲಗೇರಿಯನ್ನು ನಿರ್ಮಿಸಬೇಡಿ ಎಂದು ಡಾ.ಅರವಿಂದ ಮಾಲಗತ್ತಿ ತಿಳಿಸಿದರು.

ಕನ್ನಡದಲ್ಲಿ ಆತ್ಮಕತೆಗಳು ಮರಾಠಿ ಆತ್ಮಚರಿತ್ರೆಯ ಪ್ರಭಾವದಿಂದ ಹುಟ್ಟಿಕೊಂಡಿದೆ ಎನ್ನುವ ವಿಮರ್ಶಕರ ಮಾತನ್ನು ಒಪ್ಪಲು ಸಾಧ್ಯವಿಲ್ಲ. ಮರಾಠಿ ಆತ್ಮ ಚರಿತ್ರೆಗಳು ಕಾದಂಬರಿಯ ಸ್ವರೂಪವನ್ನು ಪಡೆದುಕೊಂಡಿದೆ. ನಾನು ಬರೆದ ‘ಗವರ್ನೆಂಟು ಬ್ರಾಹ್ಮಣ’ ಆತ್ಮ ಚರಿತ್ರೆಯಲ್ಲ, ಅದು ಆತ್ಮ ಕತೆ. ಇದರ ಹಿಂದೆ ಮರಾಠಿ ಆತ್ಮಚರಿತ್ರೆಗಳ ಪ್ರಭಾವವಿಲ್ಲ. ನಾನು ಪ್ರಥಮ ಬಾರಿಗೆ ಅದನ್ನು ಆತ್ಮಕತೆ ಎಂದು ಕರೆದೆ. ಅದೇ ರೀತಿ ಕನ್ನಡದ ಆತ್ಮಚರಿತ್ರೆಗಳು ಮರಾಠಿ ಆತ್ಮ ಚರಿತ್ರೆಗಳಿಗಿಂತ ಭಿನ್ನವಾಗಿವೆ. ಇಲ್ಲಿ ವಿವಿಧ ಘಟನೆಗಳು ಕಥನಗಳ ರೂಪದಲ್ಲಿ ದಾಖಲಾಗಿವೆ. ಕನ್ನಡ ಸಾಹಿತ್ಯದಲ್ಲಿ 100ಕ್ಕೂ ಮಿಕ್ಕಿ ಆತ್ಮ ಕಥೆಗಳು ಪ್ರಕಟವಾಗಿವೆ. ಆದರೆ ಸಾಹಿತ್ಯ ಅಧ್ಯಯನದ ಸಂದರ್ಭದಲ್ಲಿ ಆತ್ಮಕತೆಗಳನ್ನು ಬದಿಗಿಡಲಾಗುತ್ತದೆ. ಏಕೆಂದರೆ ನವೋದಯ, ಪ್ರಗತಿ ಶೀಲ ಸಾಹಿತ್ಯದ ಸಂದರ್ಭದಲ್ಲಿ ಕೆಲವು ಆತ್ಮಕತೆಗಳನ್ನು ಹೊರತು ಪಡಿಸಿದರೆ ಉಳಿದವು ಸ್ವಪ್ರತಿಷ್ಠೆಯ ಕತೆಗಳಾಗಿತ್ತು. ಆದರೆ ದಲಿತ ಬಂಡಾಯ ಕಾಲಘಟ್ಟದಲ್ಲಿ ರಚನೆಯಾದ ಆತ್ಮಕತೆಗಳು ಆ ಕಾಲದ ತಳ ಸಮುದಾಯದ ಸಮಷ್ಟಿ ಪ್ರಜ್ಞೆಯ ಪ್ರತೀಕವಾಗಿತ್ತು ಎಂದು ಅರವಿಂದ ಮಾಲಗತ್ತಿ ತಿಳಿಸಿದ್ದಾರೆ. ಭಾರತೀಯತೆ ಎಂದರೆ ಏಕರೂಪ ಸಂಸ್ಕೃತಿಯಲ್ಲ.ಹಲವು ವೈರುಧ್ಯಗಳು ಒಂದಾಗಿರುವ ಸಂಸ್ಕೃತಿ ಎಂದು ಅರವಿಂದ ಮಾಲಗತ್ತಿ ವಿವರಿಸಿದರು.

ದಲಿತರ ಬದುಕಿನ ಹಕ್ಕು ಕಸಿದುಕೊಳ್ಳಬಾರದು

ದಲಿತರು ಸತ್ತ ಪ್ರಾಣಿಯ ಚರ್ಮ ಸುಲಿದು ಅದನ್ನು ವಾದ್ಯ ಪರಿಕರವಾಗಿ ಮಾಡುತ್ತಾರೆ. ಗೋರಕ್ಷಣೆಯ ಹೆಸರಿನಲ್ಲಿ ದಲಿತರ ಬದುಕಿನ ಹಕ್ಕನ್ನು ಕಸಿದು ಕೊಳ್ಳಬಾರದು. ಪ್ರಧಾನಿ ಮೋದಿ ನಕಲಿ ಗೋರಕ್ಷಕರ ಬಗ್ಗೆ ಹೇಳುತ್ತಾರೆ. ಆದರೆ ಗೋರಕ್ಷಣಾ ಸಿದ್ದಾಂತವನ್ನು ಮೀರುವ ಮಾತು ಆಡುವುದಿಲ್ಲ. ಕವಿ ಕುವೆಂಪು ಹೇಳಿದಂತೆ ಗೋವನ್ನು ಸಾಕದವರಿಗೆ ಗೋರಕ್ಷಣೆಯ ಬಗ್ಗೆ ಮಾತನಾಡುವ ಹಕ್ಕಿಲ್ಲ ಎನ್ನುವ ಮಾತನ್ನು ಮತ್ತೆ ನೆನಪಿಸಿಕೊಳ್ಳಬೇಕಾಗುತ್ತದೆ ಎಂದು ಅರವಿಂದ ಮಾಲಗತ್ತಿ ವಿವರಿಸಿದರು.

ಗೋ ಸಂರಕ್ಷಣೆಯ ಹೆಸರಿನಲ್ಲಿ ಭಾರತೀಯ ಸಂಸ್ಕೃತಿಯ ನಿರಾಕರಣೆ

ಭಾರತದಲ್ಲಿನ ಭೂ ರಹಿತ ದಲಿತರು ಸತ್ತ ಪ್ರಾಣಿಗಳ ಚರ್ಮ ಸುಲಿಯುವ ವೃತ್ತಿಯನ್ನು ಈ ದೇಶದಲ್ಲಿ ಅನಾದಿ ಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ.ಅದರಿಂದ ಚರ್ಮ ವಾದ್ಯಗಳನ್ನು ಮಾಡುತ್ತಾರೆ. ಆ ವಾದ್ಯ ಪರಿಕರಗಳನ್ನು ದೇವಸ್ಥಾನಗಳಲ್ಲಿ ನುಡಿಸಲಾಗುತ್ತದೆ. ದಲಿತರು ಸತ್ತ ಪ್ರಾಣಿಯ ಚರ್ಮ ಸುಲಿಯುವುದನ್ನು ನಿರಾಕರಿಸಿದರೆ ವಾದ್ಯಗಳನ್ನು ನಿರಾಕರಿಸಿದಂತಾಗುತ್ತದೆ. ಇದರೊಂದಿಗೆ ಭಾರತೀಯ ಸಂಸ್ಕೃತಿಯನ್ನು ನಿರಾಕರಿಸಿದಂತಾಗುತ್ತದೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಭಾರತದಲ್ಲಿ ಹಿಂಸೆಗೆ ವಿರುದ್ಧವಾದ ಸಂಸ್ಕೃತಿ ಪಂಪನ ಕಾಲದಿಂದಲೂ ಬೆಳೆದು ಬಂದಿದೆ. ಭಾರತೀಯತೆ ಎಂದರೆ ಬಹು ರೂಪಿ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿ.ವಿ.ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ಬಿ.ಶಿವರಾಮ ಶೆಟ್ಟಿ ತಿಳಿಸಿದರು.

ಸಮಾರಂಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯೆ ಮಾಧವಿ ಭಂಡಾರಿ ಪ್ರಾಧಿಕಾರದ ವತಿಯಿಂದ ಹಮ್ಮಿ ಕೊಂಡ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಕಮ್ಮಟದ ಸಂಚಾಲಕ ಡಾ.ವಿಠಲ ಭಂಡಾರಿ ಕಮ್ಮಟದ ಕುರಿತು ವಿವರಿಸಿದರು. ಸಾಹಿತ್ಯ ಸಮುದಾಯದ ಸಂಚಾಲಕ ಡಾ.ನಾಗಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ.ಸರಸ್ವತಿ ಸ್ವಾಗತಿಸಿದರು. ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ವಂದಿಸಿದರು. ಡಾ.ಪ್ರಕಾಶ್‌ಚಂದ್ರ ಶಿಶಿಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News