ಸುಳ್ಯ: ಬ್ಯಾರಿಕೇಡ್‌ಗೆ ಕಾರು ಢಿಕ್ಕಿಯಾಗಿ ಬೆಂಗಳೂರಿನ ವ್ಯಕ್ತಿ ಮೃತ್ಯು
ಸುಳ್ಯ, ಆ.28: ಸುಳ್ಯದ ಜ್ಯೋತಿ ಸರ್ಕಲ್ ಬಳಿ ರಸ್ತೆ ಬ್ಯಾರಿಕೇಡ್‌ಗೆ ಕಾರು ಢಿಕ್ಕಿಯಾಗಿ ಕಾರಿನಲ್ಲಿದ್ದ ವ್ಯಕ್ತಿ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ನಡೆದಿದೆ.
ಬೆಂಗಳೂರಿನ ಕೋರಮಂಗಲ ನಿವಾಸಿ ಪಳನಿಯಪ್ಪ (62) ಮೃತಪಟ್ಟ ವ್ಯಕ್ತಿ.
ಪಳನಿಯಪ್ಪಅವರು ಅಸೌಖ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗೆಂದು ಬೆಂಗಳೂರು ನಂಜನಗೂಡಿನ ಗುರುಪ್ರಸಾದ್ ಎಂಬವರ ಟೊಯೊಟಾ ಇಟಿಯೋಸ್ ಕಾರಿನಲ್ಲಿ ಮನೆಯವರ ಜತೆ ಪುತ್ತೂರಿಗೆ ತೆರಳುತ್ತಿದ್ದರು. ಮುಂಜಾನೆ 5:15ರ ಸುಮಾರಿಗೆ ಕಾರು ಸುಳ್ಯ ಮುಖ್ಯಪೇಟೆ ದಾಟಿ ಜ್ಯೋತಿ ಸರ್ಕಲ್ ಬಳಿ ರಸ್ತೆ ದಿಬ್ಬ ದಾಟಿ ಹೋಗುತ್ತಿದ್ದಾಗ, ಎದುರಿನಿಂದ ಬಂದ ವಾಹನವೊಂದಕ್ಕೆ ಸೈಡ್ ಕೊಡುವ ಯತ್ನದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಬ್ಯಾರಿಕೇಡ್‌ಗೆ ಢಿಕ್ಕಿಯಾಯಿತು. ಪರಿಣಾಮ ಕಾರಿನ ಎದುರು ಸೀಟಿನಲ್ಲಿ ಕುಳಿತಿದ್ದ ಪಳನಿಯಪ್ಪ ಎದುರಿಗೆ ಮುಗ್ಗರಿಸಿ ಕಾರಿನೊಳಗೆ ಗುದ್ದಲ್ಪಟ್ಟರು. ಕಾರಿನ ಹಿಂಬದಿ ಸೀಟ್‌ನಲ್ಲಿ ಕುಳಿತಿದ್ದ ಪಳನಿಯಪ್ಪರ ಪತ್ನಿ ಸುಮತಿ, ಸುರೇಶ್ ಮತ್ತು ಲಕ್ಷ್ಮೀ ಎಂಬವರಿಗೂ ಗಾಯವಾಗಿದೆ.
ಅಪಘಾತ ನಡೆದ ಸಂದರ್ಭ ಹಳೆಗೇಟಿನ ಶಂಕರ ಎಂಬವರ ರಿಕ್ಷಾ ಆ ರಸ್ತೆಯಲ್ಲಿ ಬರುತ್ತಿತ್ತು. ಅವರು ತಕ್ಷಣ ಅಪಘಾತ ನಡೆದ ಸ್ಥಳಕ್ಕೆ ಬಂದು, ಕಾರು ಚಾಲಕನ ಜತೆ ಸೇರಿಕೊಂಡು ಗಾಯಗೊಂಡ ಪಳನಿಯಪ್ಪ ಹಾಗೂ ಮೂವರನ್ನು ರಿಕ್ಷಾದಲ್ಲಿ ಸರಕಾರಿ ಆಸ್ಪತ್ರೆಗೆ ಕರೆತಂದರು. ಆಸ್ಪತ್ರೆ ತಲುಪುವಷ್ಟರಲ್ಲಿ ಪಳನಿಯಪ್ಪಕೊನೆಯುಸಿರೆಳೆದರೆಂದು ತಿಳಿದು ಬಂದಿದೆ. ಅಪಘಾತದ ಸುದ್ದಿ ತಿಳಿದು ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಸರಕಾರಿ ಆಸ್ಪತ್ರೆಗೆ ಬಂದು ಗಾಯಗೊಂಡಿದ್ದ ಸುಮತಿ, ಸುರೇಶ್, ಲಕ್ಷ್ಮೀಯವರನ್ನು ಕೆವಿಜಿ ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಕರಿಸಿದರು.
ಪಳನಿಯಪ್ಪ ಮತ್ತು ಸುರೇಶ್ ಬೆಂಗಳೂರಿನ ಕೋರಮಂಗಲದವರು. ಸುರೇಶ್‌ರ ಕಾಲಿಗೆ ಗಾಯವಾದಾಗ ಅವರು ಪುತ್ತೂರಿನಿಂದ ಹಳ್ಳಿ ಔಷಧ ಮಾಡಿದ್ದರು. ಪಳನಿಯಪ್ಪರಿಗೂ ಲಿವರ್ ಸಮಸ್ಯೆ ಆದಾಗ ಹಳ್ಳಿ ಮದ್ದು ಮಾಡಲೆಂದು ಅವರು ಪುತ್ತೂರಿಗೆ ಹೋಗುತ್ತಿದ್ದರೆಂದು ತಿಳಿದು ಬಂದಿದೆ.