ಬ್ಯಾರಿ ಭಾಷೆಯ ಕಲಿಕೆಗೆ ವ್ಯಾಕರಣ, ನಿಘಂಟು ಪೂರಕ: ಡಾ.ಬಿ.ಎ.ವಿವೇಕ ರೈ

Update: 2016-08-28 13:12 GMT

ಮಂಗಳೂರು, ಆ.28: ಬ್ಯಾರಿ ಭಾಷೆಯ ಕಲಿಕೆಗೆ ವ್ಯಾಕರಣ, ನಿಘಂಟು ಪೂರಕವಾಗಿದೆ. ಈ ನಿಟ್ಟಿನಲ್ಲಿಅಕಾಡೆಮಿಯ ಮೂಲಕ ಹಮ್ಮಿಕೊಂಡ ಕಾರ್ಯ ಮಹತ್ವದ್ದಾಗಿದೆ ಎಂದು ಹಿರಿಯ ವಿದ್ವಾಂಸ, ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ತಿಳಿಸಿದ್ದಾರೆ.

ಅವರು ಇಂದು ನಗರದ ಬ್ಯಾರಿ ಸಾಹಿತ್ಯ ಅಕಾಡೆಮಿಯ ಕಚೇರಿಯಲ್ಲಿ ಹಮ್ಮಿಕೊಂಡ ಬ್ಯಾರಿ ಭಾಷಾ ವ್ಯಾಕರಣ ರಚನೆಗೆ ಚಾಲನೆ ನೀಡಿ ಮಾತನಾಡಿದರು.

ಜನರಾಡುವ ಭಾಷೆಯಲ್ಲಿ ಭಾಷೆಯ ಸತ್ವ ಅಡಗಿದೆ. ಅದೇ ಭಾಷೆಯ ಜೀವ ಸತ್ವ. ಜನಸಾಮಾನ್ಯರು ವ್ಯಾಕರಣ ಓದದೆ ಭಾಷೆಯನ್ನು ಬಳಸುತ್ತಾರೆ.ಆದರೆ ಒಂದು ಭಾಷೆಯನ್ನು ಅಧಿಕೃತಗೊಳಿಸಲು ಹಾಗೂ ಮುಂದಿನ ದಿನಗಳಲ್ಲಿ ಇತರ ಭಾಷೆಗಳನ್ನಾಡುವವರು ಬ್ಯಾರಿ ಭಾಷೆಯನ್ನು ಕಲಿಯಬೇಕಾದರೆ ಅದಕ್ಕೊಂದು ಅಧಿಕೃತ ಸ್ವರೂಪ ಬೇಕಾಗುತ್ತದೆ. ಈ ಸ್ವರೂಪ ನೀಡಲು ವ್ಯಾಕರಣ, ನಿಘಂಟಿನ ರಚನೆಯ ಅಗತ್ಯವೂ ಇದೆ. ಉದಾಹರಣೆಗೆ ಇಂಗ್ಲೀಷ್ ಭಾಷೆಯ ಬೆಳವಣಿಗೆಗೆ ಆ ಭಾಷೆಯಲ್ಲಿ ರಚನೆಯಾದ ನಿಘಂಟು, ವ್ಯಾಕರಣ ಪ್ರಮುಖ ಕಾರಣವಾಯಿತು ಎಂದು ವಿವೇಕ ರೈ ತಿಳಿಸಿದರು.

ಸಚಿವ ರಮಾನಾಥ ರೈ ಶ್ಲಾಘನೆ

ಬ್ಯಾರಿಭಾಷಾ ಬೆಳವಣಿಗೆಗೆ ಸಂಬಂಧಿಸಿದಂತೆ ಅಕಾಡೆಮಿಯ ವತಿಯಿಂದ ನಿಘಂಟಿನ ರಚನೆ, ವ್ಯಾಕರಣ ರಚನೆ ಮೊದಲಾದ ಕೆಲಸಗಳನ್ನು ಭಾಷೆಯ ಬಗೆಗಿನ ಪ್ರೀತಿಯಿಂದ, ಕಾಳಜಿಯಿಂದ ಮಾಡುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದರು. 

ಈ ಸಂದರ್ಭದಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ತಯಾರಿಸಿರುವ ಬ್ಯಾರಿ -ಕನ್ನಡ ಭಾಷಾ ನಿಂಘಟಿನ 2ನೆ ಕರಡು ಪ್ರತಿಯನ್ನು ಅಕಾಡೆಮಿಯ ಸದಸ್ಯರಾದ ಬಿ.ಎಂ.ಇಚ್ಲಂಗೊಡು, ಸಂಶುದ್ದೀನ್ ಮಡಿಕೇರಿ ಹಾಗೂ ಇತರ ಸದಸ್ಯರು ಸಚಿವ ಬಿ. ರಮಾನಾಥ ರೈಗೆ ಹಸ್ತಾಂತರಿಸಿದರು.

ನಾಲ್ಕು ತಿಂಗಳ ಒಳಗೆ ಬ್ಯಾರಿ ಭಾಷಾ ವ್ಯಾಕರಣ ಪುಸ್ತಕ ರಚನೆ

ಮುಂದಿನ ನಾಲ್ಕು ತಿಂಗಳ ಒಳಗೆ ಬ್ಯಾರಿ ಭಾಷಾ ವ್ಯಾಕರಣ ಪುಸ್ತಕ ರಚನೆಯನ್ನು ಪೂರ್ಣಗೊಳಿಸಲಾಗುವುದು. ಬ್ಯಾರಿ ಅಕಾಡೆಮಿಯ ವತಿಯಿಂದ ಮುಂದಿನ ದಿನಗಳಲ್ಲಿ ಹಿರಿಯರೊಂದಿಗೆ ಸಂವಾದ ಕಾರ್ಯಕ್ರಮ, ರಾಜ್ಯ ಸಮ್ಮೇಳನ, ಅಕ್ಟೋಬರ್ 3ರಂದು ಬ್ಯಾರಿ ಭಾಷಾ ದಿನಾಚರಣೆ ಮಾಡಲಾಗುವುದು. ಬ್ಯಾರಿ ಭಾಷೆಯಲ್ಲಿ ಪಠ್ಯಪುಸ್ತಕ ರಚಿಸುವ ಉದ್ದೇಶವನ್ನು ಹೊಂದಲಾಗಿದೆ. ಮಂಗಳೂರು ಆಕಾಶವಾಣಿಯಿಂದ ಬ್ಯಾರಿ ಭಾಷಾ ಕಾರ್ಯಕ್ರಮಕ್ಕೆ ಆಕಾಶವಾಣಿಯ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ ಎಂದು ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ.ಸುರೇಂದ್ರ ರಾವ್, ಭಾಷೆ ಆಯಾ ಪ್ರದೇಶದ ಸಂಸ್ಕೃತಿಯೊಂದಿಗೆ ನಿಕಟವಾಗಿ ಬೆಳೆದು ಬಂದಿದೆ. ಈ ಸೂಕ್ಷ್ಮಗಳನ್ನು ನಿಘಂಟು ರಚನೆಯ ಸಂದರ್ಭದಲ್ಲಿ ಅರಿತುಕೊಳ್ಳಬೇಕಾಗಿದೆ ಎಂದರು.

ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು.ಅಬ್ದುಲ್ಲತೀಫ್ ನೇರಳಕಟ್ಟೆ ವಂದಿಸಿದರು. ಮುಹಮ್ಮದ್ ಶರೀಫ್ ನಿರ್ಮುಂಜೆ ಕಾರ್ಯಕ್ರಮ ನಿರೂಪಿಸಿದರು. ಜೋಕಟ್ಟೆಯ ಅಂಜುಮಾನ್ ಪ.ಪೂ ಕಾಲೇಜಿನ ಸಂಚಾಲಕ ಮೂಸಬ್ಬ ಪಿ.ಬ್ಯಾರಿ, ಚಿಕ್ಕಮಗಳೂರು ಜಿಲ್ಲಾ ಬ್ಯಾರಿ ಒಕ್ಕೂಟದ ಅಧ್ಯಕ್ಷ ಕೆ.ಮುಹಮ್ಮದ್, ಮಾಜಿ ಮೇಯರ್ ಶಶಿಧರ ಹೆಗ್ಡೆ ಹಾಗೂ ಅಕಾಡೆಮಿಯ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News